ಶ್ರೀರಂಗಪಟ್ಟಣ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರೈತ ಮುಖಂಡರು ಕೈಗೊಂಡಿರುವ ರಾಜಕೀಯ ತೀರ್ಮಾನಗಳು, ತಾಲ್ಲೂಕು ಘಟಕದ ಪದಾಧಿಕಾರಿಗಳ ಧೋರಣೆಯನ್ನು ವಿರೋಧಿಸಿ ಸಂಘದ ಭಿನ್ನಮತೀಯರು ಗುರುವಾರ ಪ್ರತ್ಯೇಕ ಸಭೆ ನಡೆಸುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.
ರೈತ ಸಂಘದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಮೇಳಾಪುರ ಸ್ವಾಮಿಗೌಡ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜೇಶ್‌ಗೌಡ, ಖಜಾಂಚಿ ನಾಗೇಂದ್ರಸ್ವಾಮಿ, ಕೆ. ಶೆಟ್ಟಹಳ್ಳಿ ಶ್ರೀಕಂಠಯ್ಯ, ತಡಗವಾಡಿ ದೇವೇಗೌಡ, ಬನ್ನಹಳ್ಳಿ ಚನ್ನೇಗೌಡ, ಅರಕೆರೆ ಪುಟ್ಟಸ್ವಾಮಿ ಇತರರು ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ಪ್ರತ್ಯೇಕ ಸಭೆ ನಡೆಸಿದರು.
ರೈತ ಸಂಘದ ಮುಖಂಡರು ತೆಗೆದುಕೊಳ್ಳುತ್ತಿರುವ ರಾಜಕೀಯ ತೀರ್ಮಾನಗಳು ಸಂಘದ ಮೂಲ ಆಶಯಕ್ಕೆ ವಿರುದ್ಧವಾಗಿವೆ. ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಸುಂದರೇಶ್, ರುದ್ರಪ್ಪ ಅವರಂತಹ ಹೋರಾಟಗಾರರು ರೂಪಿಸಿದ ಸಂವಿಧಾನವನ್ನು ಗಾಳಿಗೆ ತೂರಲಾಗುತ್ತಿದೆ. ಅನುಕೂಲಸಿಂಧು ರಾಜಕೀಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮೇಳಾಪುರ ಸ್ವಾಮಿಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆ ಉಪ ಚುನಾವಣೆ ಮತ್ತು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಕೇಳದೆ ಮುಖಂಡರು ಏಕಮುಖ ತೀರ್ಮಾನ ಕೈಗೊಂಡಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರು ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ರಾಜ್ಯ ಸಮಿತಿಗೆ ವಿರುದ್ಧವಾಗಿ ಅವರಿಗೆ ಬೆಂಬಲ ನೀಡಿದ್ದಾರೆ.
ರೈತ ಸಂಘದಲ್ಲಿ ಸದ್ಯ ಆಂತರಿಕ ಪ್ರಜಾಪ್ರಭುತ್ವ ಇಲ್ಲದೇ ಇರುವುದರಿಂದ ಸಂಘದ ಮೂಲ ಆಶಯದಂತೆ ರಾಜಕೀಯ ಮುಕ್ತವಾದ ಸಂಘಟನೆಯನ್ನು ರೂಪಿಸಲು ಸಭೆ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಎಲ್ಲ ತಾಲ್ಲೂಕುಗಳ ಅತೃಪ್ತರ ಸಭೆಯನ್ನು ಮಂಡ್ಯದಲ್ಲಿ ನಡೆಸಲಾಗುವುದು. ಅಗತ್ಯಬಿದ್ದರೆ ಪ್ರತ್ಯೇಕ ಸಂಘವನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜೇಶ್‌ಗೌಡ ತಿಳಿಸಿದರು.
ನಾಗೇಂದ್ರಸ್ವಾಮಿ ಖಂಡನಾ ನಿರ್ಣಯ ಮಂಡಿಸಿದರು. ಟಿ.ಸಿ. ದೇವೇಗೌಡ, ದೊಡ್ಡಪಾಳ್ಯ ಚಂದ್ರು, ಮಹೇಶ್, ಜಗದೀಶ್, ಕೆ.ಶೆಟ್ಟಹಳ್ಳಿ ಶಿವರಾಂ, ಸಿದ್ದರಾಮು, ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಮ್ಮಣ್ಣೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಗೌಡ ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.