ADVERTISEMENT

ರೌಡಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST

ವಿಜಯಪುರ: ಪೊಲೀಸ್‌ ಸಿಬ್ಬಂದಿಗೆ ಇರಿದು ಪರಾರಿಯಾಗಲು ಯತ್ನಿಸಿದ ರೌಡಿ ಯೂನೂಸ್‌ ಪಟೇಲ ಎಂಬಾತನ ಮೇಲೆ, ನಗರದ ಗಾಂಧಿಚೌಕ್ ಪೊಲೀಸರು ಸೋಮವಾರ ನಸುಕಿನಲ್ಲಿ ಗುಂಡು ಹಾರಿಸಿದ್ದಾರೆ.

ಇಲ್ಲಿನ ನವಬಾಗ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಚಾಕು ಇರಿತದಿಂದ ಗಾಯಗೊಂಡಿರುವ ಪಿಎಸ್‌ಐ ಆರೀಫ್‌ ಮುಶಾಪುರಿ, ಕಾನ್‌ಸ್ಟೆಬಲ್‌ ಎಂ.ಎ.ಮಾದನಶೆಟ್ಟಿ ಅವರು ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಆರೋಪಿಯ ಎಡ ಮೊಣಕಾಲಿಗೆ ಗುಂಡೇಟಿನಿಂದ ಗಾಯವಾಗಿದ್ದು, ಚಿಕಿತ್ಸೆಗಾಗಿ ಇದೇ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಕೊಲೆ ಪ್ರಕರಣವೊಂದರ ಆರೋಪಿಯಾದ ಯೂನೂಸ್‌, ಇಲ್ಲಿನ ನವಬಾಗದ ಸಂದಲಬಾವಡಿ ಪ್ರದೇಶದ ಮನೆಯೊಂದರಲ್ಲಿದ್ದಾನೆ ಎಂಬ ಮಾಹಿತಿ ಇತ್ತು. ಅದನ್ನು ಆಧರಿಸಿ, ಪೊಲೀಸರು ನಸುಕಿನ ನಾಲ್ಕು ಗಂಟೆ ವೇಳೆಗೆ ಆ ಮನೆ ಮೇಲೆ ದಾಳಿ ನಡೆಸಿ ಬಂಧಿಸಲು ಮುಂದಾಗಿದ್ದಾರೆ. ಆಗ, ಆರೋಪಿಯು ಪರಾರಿಯಾಗಲು ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ ಇಬ್ಬರಿಗೂ ಚಾಕುವಿನಿಂದ ಇರಿದು ಓಡಲು ಯತ್ನಿಸಿದ್ದಾನೆ. ಈ ಸಂದರ್ಭ, ಪಿಎಸ್‌ಐ ಆರೀಫ್‌ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಅದನ್ನು ಲೆಕ್ಕಿಸದ ಆತ, ಪೊಲೀಸರ ಮೇಲೆ ಕಲ್ಲು ತೂರಿ ಸ್ಥಳದಿಂದ ಕಾಲ್ಕೀಳಲು ಮುಂದಾಗಿದ್ದಾನೆ. ಆಗ ಗುಂಡು ಹಾರಿಸಿದ್ದಾರೆ. ಕಾಲಿಗೆ ಗುಂಡು ತಗುಲುತ್ತಿದ್ದಂತೆಯೇ ನೆಲಕ್ಕುರುಳಿದ ಆತನನ್ನು ಹಾಗೂ ಅವನ ಬಳಿಯಿದ್ದ ಚಾಕುವನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಯೂನೂಸ್‌, 2016ರ ಮೇ 29ರಂದು ರಸ್ತೆ ಬದಿಯಲ್ಲಿ ಮಲಗಿದ್ದ ಇಟ್ಟಂಗಿಹಾಳ ಗ್ರಾಮದ ಶ್ರೀಶೈಲ ಹಟ್ಟಿ ಎಂಬಾತನ ಕೊಲೆ ಮಾಡಿದ್ದ. ಈ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈತನ ವಿರುದ್ಧ ಕೊಲೆ ಹಾಗೂ ಕೊಲೆ ಯತ್ನದ ಒಟ್ಟು ನಾಲ್ಕು ಪ್ರಕರಣಗಳಿವೆ’ ಎಂದು ಜೈನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.