ADVERTISEMENT

ಲಕ್ಷಾಧಿಪತಿ ಆಗಲಿರುವ ಫ್ಲಿಪ್‌ಕಾರ್ಟ್‌ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:30 IST
Last Updated 10 ಮೇ 2018, 19:30 IST
ಲಕ್ಷಾಧಿಪತಿ ಆಗಲಿರುವ ಫ್ಲಿಪ್‌ಕಾರ್ಟ್‌ ಸಿಬ್ಬಂದಿ
ಲಕ್ಷಾಧಿಪತಿ ಆಗಲಿರುವ ಫ್ಲಿಪ್‌ಕಾರ್ಟ್‌ ಸಿಬ್ಬಂದಿ   

ಬೆಂಗಳೂರು: ಅಮೆರಿಕದ ವಾಲ್‌ಮಾರ್ಟ್‌, ಇ–ಕಾಮರ್ಸ್‌ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್‌ ಅನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದದ ಫಲವಾಗಿ ಸಂಸ್ಥೆಯ ಅನೇಕ ನೌಕರರುಲಕ್ಷಾಧಿಪತಿಗಳಾಗಲಿದ್ದಾರೆ.

ಫ್ಲಿಪ್‌ಕಾರ್ಟ್‌ನ 200ರಿಂದ 250 ಸಿಬ್ಬಂದಿ ತಮ್ಮ ‘ಉದ್ಯೋಗಿಯ ಷೇರು ಮಾಲೀಕತ್ವ ಯೋಜನೆಯನ್ನು (ಇಎಸ್‌ಒಪಿ) ನಗದಾಗಿ ಪರಿವರ್ತಿಸಿಕೊಳ್ಳಲು ಸಂಸ್ಥೆ ಅನುಮತಿ ನೀಡಿದರೆ ಅವರಿಗೆ  ₹3,350 ಕೋಟಿಗಳಷ್ಟು ಲಾಭ ಆಗಲಿದೆ.

ಈ ಸ್ವಾಧೀನ ಒಪ್ಪಂದದ ಒಟ್ಟಾರೆ ಮೌಲ್ಯ ₹1.39 ಲಕ್ಷ ಕೋಟಿಗಳಷ್ಟಿದೆ. ಇ–ಕಾಮರ್ಸ್‌ ವಲಯದಲ್ಲಿನ ಅತಿದೊಡ್ಡ ಒಪ್ಪಂದ ಇದಾಗಿದೆ. ಇದರಿಂದ ಫ್ಲಿಪ್‌ಕಾರ್ಟ್‌ನ ಸಿಬ್ಬಂದಿಯ ಸಂಪತ್ತೂ ಗಮನಾರ್ಹವಾಗಿ ಹೆಚ್ಚಳಗೊಳ್ಳಲಿದೆ.

ADVERTISEMENT

‘ಸಂಸ್ಥೆಯ ಕೆಲ ಹಾಲಿ ಮತ್ತು ಮಾಜಿ ನೌಕರರು ‘ಇಎಸ್‌ಒಪಿ’ಗಳ ಮರು ಖರೀದಿಯನ್ನು ತುಂಬ ಕಾತರದಿಂದ ಎದುರು ನೋಡುತ್ತಿದ್ದಾರೆ. ಇವರಲ್ಲಿ ಮಿಂತ್ರಾ ಮತ್ತು ಜಬೊಂಗ್‌ನ ಸಿಬ್ಬಂದಿಯೂ ಸೇರಿದ್ದಾರೆ. ಸಂಸ್ಥೆ ತೊರೆದವರಲ್ಲಿಯೂ ಕೆಲವರು ‘ಇಎಸ್‌ಒಪಿ’ಗಳನ್ನು ಹೊಂದಿದ್ದಾರೆ. ಅವರೆಲ್ಲರ ಸಂಖ್ಯೆ 2 ಸಾವಿರ ದಾಟಬಹುದು. ಒಪ್ಪಂದದ ಪ್ರಕಾರ ಇವರಲ್ಲಿ 250 ಜನರು ‘ಇಎಸ್‌ಒಪಿ’ಗಳನ್ನು ನಗದಾಗಿ ಪರಿವರ್ತಿಸಿಕೊಳ್ಳಲು ಅರ್ಹರಾಗಲಿದ್ದಾರೆ’ ಎಂದು ಸಂಸ್ಥೆಯ ಮಾರಾಟ ತಂಡದ ಉದ್ಯೋಗಿ ತಿಳಿಸಿದ್ದಾರೆ.

‘ಸಂಸ್ಥೆಯ ಕೆಲ ಹಿರಿಯ ಅಧಿಕಾರಿಗಳು ಲಕ್ಷಾಧಿಪತಿಗಳಾಗಲಿದ್ದಾರೆ. ಇತರರ ಸಂಪತ್ತೂ ಗಣನೀಯವಾಗಿ ಹೆಚ್ಚಳಗೊಳ್ಳಲಿದೆ. ಈ ಸಂಬಂಧ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಬೇಕಾಗಿದೆ. ಸಂಸ್ಥೆಯೊಂದರ ಗರಿಷ್ಠ ಪ್ರಮಾಣದ ಪಾಲು ಬಂಡವಾಳವನ್ನು ಇನ್ನೊಂದು ಸಂಸ್ಥೆ ಖರೀದಿಸಿದಾಗ, ಸಾಲ ಮರುಪಾವತಿಯ ಸಮಸ್ಯೆ ಇರದಿದ್ದರೆ, ಉದ್ಯೋಗಿಗಳು ತಮ್ಮ ಬಳಿಯಲ್ಲಿ ಇರುವ ‘ಇಎಸ್‌ಒಪಿ’ಗಳನ್ನು ನಗದಿಗೆ ಪರಿವರ್ತಿಸಿಕೊಳ್ಳಲು ಅವಕಾಶ ಇರಲಿದೆ.

ಫ್ಲಿಪ್‌ಕಾರ್ಟ್‌, ಕಳೆದ ಐದು ವರ್ಷಗಳಲ್ಲಿ ನಾಲ್ಕು ಬಾರಿ ‘ಇಎಸ್‌ಒಪಿ’ಗಳನ್ನು ನಗದಾಗಿ ಪರಿವರ್ತಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.

ಮುಖ್ಯಾಂಶಗಳು

* ಸಿಬ್ಬಂದಿಗೆ ₹3,350 ಕೋಟಿಗಳಷ್ಟು ಲಾಭ

* ಮೌಲ್ಯ ₹1.39 ಲಕ್ಷ ಕೋಟಿ

* ಸಂಸ್ಥೆ ತೊರೆದ ಕೆಲವರ ಬಳಿ ‘ಇಎಸ್‌ಒಪಿ’ ಇವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.