ಚಿತ್ರದುರ್ಗ: ‘ಹೂಡಿಕೆದಾರರ ಸಮಾವೇಶದ ಕಾರಣ ನೀಡಿ ಬಸ್, ಲಾರಿಗಳಿಗೆ ಬೆಂಗಳೂರು ಪ್ರವೇಶಿಸಲು ಫೆ.1ರಿಂದ 10ರವರೆಗೆ ನಿರ್ಬಂಧ ಹೇರಿರುವುದು ರಾಜ್ಯ ಸರ್ಕಾರ ಎಷ್ಟರಮಟ್ಟಿಗೆ ಮೂಲಸೌಕರ್ಯ ಅಭಿವೃದ್ಧಿಪಡಿಸಿದೆ ಎಂಬುದನ್ನು ತೋರಿಸುತ್ತದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಸಂಬಂಧ ನಗರದ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಜನರ ತೆರಿಗೆ ಹಣದಲ್ಲಿ ಸರ್ಕಾರ ₹ 40 ಕೋಟಿ ಖರ್ಚು ಮಾಡಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಈಗ 10 ದಿನಗಳಿಗಾಗಿ ಲಾರಿ, ಬಸ್‌ಗಳ ಬೆಂಗಳೂರು ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ನಂತರವಾದರೂ ವಾಹನಗಳು ಬೆಂಗಳೂರಿಗೆ ಸಂಚರಿಸುತ್ತವೆ. ಹೀಗೆ ನಿರ್ಬಂಧ ಹೇರಿ ಸಮಾವೇಶ ಮಾಡುವುದರಿಂದ ಏನು ಸಾಧನೆ ಮಾಡಿದಂತಾಗುತ್ತದೆ’ ಎಂದು ಅವರು ಪ್ರಶ್ನಿಸಿದರು.
‘ಪಶ್ಚಿಮ ಬಂಗಾಳದಲ್ಲಿ ಕೆಲವು ವರ್ಷಗಳ ಹಿಂದೆ ಹೂಡಿಕೆದಾರರ ಸಮಾವೇಶ ನಡೆದ ಸಂದರ್ಭದಲ್ಲಿ ₹ 3 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಭರವಸೆ ದೊರೆಯಿತು. ಆದರೆ, ಬಂದಿದ್ದು ಮಾತ್ರ ₹ 14 ಸಾವಿರ ಕೋಟಿ. ಸಮಾವೇಶ ಮಾಡಿದ ಕೂಡಲೇ ಬಂಡವಾಳ ಹರಿದುಬರುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.