ADVERTISEMENT

‘ಲಿಂಗಾಯತ: ಸ್ವತಂತ್ರ ಧರ್ಮ ಮನ್ನಣೆಗೆ ಮಹಾಸಭಾ ಅಡ್ಡಿ’

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 19:43 IST
Last Updated 8 ಜುಲೈ 2017, 19:43 IST
ಮಾತೆ ಮಹಾದೇವಿ
ಮಾತೆ ಮಹಾದೇವಿ   

ಬಾಗಲಕೋಟೆ: ‘ಲಿಂಗಾಯತ ಸ್ವತಂತ್ರ ಧರ್ಮದ ಮನ್ನಣೆ ಪಡೆಯಲು ವೀರಶೈವ ಮಹಾಸಭಾ ಅಡ್ಡಿಯಾಗಿದೆ’ ಎಂದು ಕೂಡಲಸಂಗಮದ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ  ಆರೋಪಿಸಿದರು.

‘ವೀರಶೈವ ಮಹಾಸಭಾ ಇಡೀ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಕೂಡಲೇ ಅದನ್ನು ಲಿಂಗಾಯತ ಧರ್ಮ ಮಹಾಸಭಾ ಎಂದು ಬದಲಾಯಿಸಬೇಕು’ ಎಂದು ಶನಿವಾರ ಕೂಡಲಸಂಗಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಲಿಂಗಾಯತ ಪದಕ್ಕೆ ಸಮನಾರ್ಥಕವಾಗಿ ವೀರಶೈವ ಪದ ಬಳಕೆ ಮಾಡುತ್ತಿರುವ ಕಾರಣ ಇಲ್ಲಿಯವರೆಗೆ ಸ್ವತಂತ್ರ ಧರ್ಮ ಸ್ಥಾನಮಾನ ಸಿಕ್ಕಿಲ್ಲ. ಬಹಳ ವರ್ಷದಿಂದ ಮಹಾಸಭಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬೀದರ್‌ನ ಖಂಡ್ರೆ ಪರಿವಾರ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಹಾಸಭಾದ ಈಗಿನ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕೂಡ ಅದಕ್ಕೆ ನೀರೆರೆಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವೀರಶೈವ ಎಂಬುದು ವೇದ ಮತ್ತು ಆಗಮಗಳ ಆಧಾರದ ಮೇಲೆ ರೂಪುಗೊಂಡ ಶೈವ ಪಂಥದ ಶಾಖೆಯಾಗಿದೆ. ಅದಕ್ಕೆ ಸ್ವತಂತ್ರ ಧರ್ಮದ ಮನ್ನಣೆ ಸಾಧ್ಯವಿಲ್ಲ. ಹಾಗಾಗಿ ಲಿಂಗಾಯತ ಹಾಗೂ ವೀರಶೈವ ಪದಗಳ ಸಮಾನಾರ್ಥಕ ಬಳಕೆ ಸರಿಯಲ್ಲ. ವೀರಶೈವ ಎಂಬುದು ಲಿಂಗಾಯತ ಸಮುದಾಯದಲ್ಲಿ ನಂತರ ಬಂದು ಸೇರಿಕೊಂಡ ಒಂದು ಉಪ ಪಂಗಡ ಮಾತ್ರ’ ಎಂದರು.

‘ಲಿಂಗಾಯತ ಶ್ರೀಸಾಮಾನ್ಯನ ಧರ್ಮ. ಬಸವಣ್ಣ ಧರ್ಮಗುರು. ಆದರೆ ಪಂಚಪೀಠಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಬೇಕಿದ್ದರೆ ವೀರಶೈವಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲಿ. ಆದರೆ, ಲಿಂಗಾಯತ ಧರ್ಮಕ್ಕೆ ತಗಲು ಹಾಕುವುದು ಬೇಡ’ ಎಂದರು.

‘ಈ ಎಲ್ಲಾ ವಿಚಾರ ಗೊತ್ತಿರುವ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರು ಅರ್ಧ ಸತ್ಯ ಮಾತ್ರ ಹೇಳುತ್ತಿದ್ದಾರೆ. ಸಂಶೋಧನೆ ಹೆಸರಲ್ಲಿ ಪೂರ್ವಾಗ್ರಹ ಪೀಡಿತ ಭಾವನೆಗಳನ್ನು ಬಿತ್ತುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
*
ಸಮಿತಿ ರಚನೆ
ಲಿಂಗಾಯತ ಸ್ವತಂತ್ರ ಧರ್ಮ ಮನ್ನಣೆ ಪಡೆಯಲು ಜನಜಾಗೃತಿ ಮೂಲಕ ಹೋರಾಟ ಸಂಘಟಿಸಲಾಗುತ್ತಿದೆ. ಅದಕ್ಕಾಗಿ ಸಮಾನ ಮನಸ್ಕ ಮಠಾಧೀಶರು, ಗಣ್ಯರು, ಸಾಹಿತಿಗಳನ್ನು ಒಳಗೊಂಡ ಲಿಂಗಾಯತ ಸಮನ್ವಯ ಸಮಿತಿ ರಚಿಸಲಾಗಿದೆ ಎಂದು ಮಾತೆ ಮಹಾದೇವಿ ಹೇಳಿದರು. ‘ರಾಜ್ಯದ ಎಲ್ಲ ಮಠಾಧೀಶ ರನ್ನು ಸಂಪರ್ಕಿಸಿ ಹೋರಾಟ ರೂಪಿಸಲಾಗುವುದು. ಇದೇ 19ರಂದು ಬೀದರ್‌ನಲ್ಲಿ ರ‍್ಯಾಲಿ ಸಂಘಟಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.