ADVERTISEMENT

ಲಿಫ್ಟ್‌ನಲ್ಲಿ ಪರದಾಡಿದ ಸಚಿವರು, ಮೇಯರ್!

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 19:30 IST
Last Updated 13 ಏಪ್ರಿಲ್ 2011, 19:30 IST
ಲಿಫ್ಟ್‌ನಲ್ಲಿ ಪರದಾಡಿದ ಸಚಿವರು, ಮೇಯರ್!
ಲಿಫ್ಟ್‌ನಲ್ಲಿ ಪರದಾಡಿದ ಸಚಿವರು, ಮೇಯರ್!   

ಮೈಸೂರು: ತಾಂತ್ರಿಕ ತೊಂದರೆಯಿಂದ ಲಿಫ್ಟ್ ಅರ್ಧದಲ್ಲಿಯೇ ಕೈಕೊಟ್ಟು ಸ್ಥಗಿತಗೊಂಡಿದ್ದರಿಂದ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್, ಮೇಯರ್ ಸಂದೇಶಸ್ವಾಮಿ ಸೇರಿದಂತೆ 17 ಮಂದಿ ಸುಮಾರು 40 ನಿಮಿಷಗಳ ಕಾಲ ಲಿಫ್ಟ್‌ನಲ್ಲಿಯೇ ಸಿಕ್ಕಿಹಾಕಿಕೊಂಡ ಘಟನೆ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ.

ಮೈಸೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನವೀಕೃತ ಡಯಾಲಿಸಿಸ್ ಘಟಕದ ಉದ್ಘಾಟನೆಗೆ ಆಗಮಿಸಿದ್ದ ಸಚಿವರು ಲಿಫ್ಟ್‌ನಲ್ಲಿ  ಹೋಗಿ ಉದ್ಘಾಟನೆ ಮುಗಿಸಿಕೊಂಡು ಮೂರನೆ ಮಹಡಿಯಿಂದ ವಾಪಸು ಬರುವಾಗ ಈ ಘಟನೆ ಸಂಭವಿಸಿದೆ. ಸುಮಾರು 40 ನಿಮಿಷಗಳ  ಕಾಲ ಸಚಿವರು, ಅಧಿಕಾರಿಗಳು ಲಿಫ್ಟ್‌ನಲ್ಲಿ ಇದ್ದುದರಿಂದ ಸ್ಥಳದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಲಿಫ್ಟ್ ಸರಿಪಡಿಸುವುದು ವಿಳಂಬವಾದಷ್ಟೂ ಕಾಲ ಹೊರಗಡೆ ಇದ್ದವರೂ ಉಸಿರು ಬಿಗಿ ಹಿಡಿದುಕೊಂಡಿದ್ದರು.

ವಿದ್ಯುತ್ ಕೂಡ ಕೈಕೊಟ್ಟಿದ್ದರಿಂದ ಒಳಗಡೆ ಇದ್ದವರು ಕತ್ತಲೆಯಲ್ಲಿಯೇ ಕೊಳೆಯುವಂತಾಯಿತು. ಕೆಲವರು ದೂರವಾಣಿ ಕರೆ ಮಾಡಿ  ವಿಷಯ ತಿಳಿಸಲು ಮುಂದಾದರಾದರೂ ಮೊಬೈಲ್ ನೆಟ್‌ವರ್ಕ್ ಲಭ್ಯವಾಗಲಿಲ್ಲ. ಕೊನೆಗೆ ಕೆ.ಆರ್.ಆಸ್ಪತ್ರೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮೆಸೇಜ್ ಮಾಡಿದರು. ಆಗ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಲಿಫ್ಟ್ ಒಳಗೆ ಆಮ್ಲಜನಕವನ್ನು ಸರಬರಾಜು ಮಾಡಿ, ಬಳಿಕ ಲಿಫ್ಟ್ ತಜ್ಞರನ್ನು ಕರೆಸಿ ಸಚಿವರು ಮತ್ತು ಇತರರನ್ನು ಪಾರು ಮಾಡಿದರು.

ADVERTISEMENT

ಸಚಿವರು, ಮೇಯರ್ ಅಲ್ಲದೆ ಉಪ ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್, ಕೆ.ಆರ್.ಆಸ್ಪತ್ರೆ ಅಧೀಕ್ಷಕಿ ಡಾ.ಗೀತಾ ಅವಧಾನಿ, ಪಿಕೆಟಿಬಿ ಆಸ್ಪತ್ರೆ ಅಧೀಕ್ಷಕ ಡಾ.ಲಕ್ಷ್ಮಣ್, ಚೆಲುವಾಂಬ ಆಸ್ಪತ್ರೆ ಅಧೀಕ್ಷಕ ಡಾ.ಕೃಷ್ಣಮೂರ್ತಿ, ಮೈಸೂರು ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಪಿ.ಎಸ್.ಕಲಾದಗಿ, ನಗರ ಪಾಲಿಕೆ ಸದಸ್ಯ ಚಿನ್ನಿ ರವಿ, ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ 17 ಮಂದಿ ಲಿಫ್ಟ್‌ನಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.