ADVERTISEMENT

ಲೋಕೋಪಯೋಗಿ ಇಲಾಖೆ: ಕೋರ್ಟ್ ಆದೇಶ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಲೋಕೋಪಯೋಗಿ ಇಲಾಖೆಯಲ್ಲಿ 56 ಮಂದಿಗೆ ಬಡ್ತಿ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಬಡ್ತಿಯಲ್ಲಿ ಮೀಸಲಾತಿ ನೀಡುವ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ, ಅಂತಿಮ ಆದೇಶ ಬರುವವರೆಗೂ ಯಥಾಸ್ಥಿತಿಯನ್ನು ಕಾಪಾಡುವಂತೆ ಇದೇ 8ರಂದು ಹೈಕೋರ್ಟ್ ಆದೇಶ ನೀಡಿದೆ. ಇಷ್ಟಾದರೂ ತರಾತುರಿಯಲ್ಲಿ ಬಡ್ತಿ ನೀಡುವ ಪ್ರಯತ್ನ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ಕಡತವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಕಳುಹಿಸಲಾಗಿದೆ.

33 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಗೆ, 21 ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಸೂಪರಿಂಟೆಂಡಿಂಗ್ ಎಂಜಿನಿಯರ್ ಹುದ್ದೆಗೆ ಹಾಗೂ ಇಬ್ಬರು ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳಿಗೆ ಮುಖ್ಯ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವ ಸಿದ್ಧವಾಗಿದೆ. ಆದರೆ ಇದಕ್ಕೆ ಸಂಬಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಬಡ್ತಿ ನೀಡುವುದು ಸರಿಯಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಹೈಕೋರ್ಟ್‌ನಲ್ಲಿರುವ ರಿಟ್ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟು ನಿಯಮ 32ರ ಅಡಿ ಸ್ವತಂತ್ರ ಪ್ರಭಾರದಲ್ಲಿಟ್ಟು ಬಡ್ತಿ ನೀಡಬಹುದು ಎಂದು ವರದಿ ನೀಡಿದೆ. ಈ ರೀತಿ ಬಡ್ತಿ ನೀಡಬೇಕಾದರೂ ಇಲಾಖಾ ಪದನ್ನೋತಿ ಸಮಿತಿಯ (ಡಿಪಿಸಿ) ಅನುಮೋದನೆ ಪಡೆಯಬೇಕು ಎಂದು ತಿಳಿಸಲಾಗಿದೆ. ಆದರೆ ಸಮಿತಿಯ ಒಪ್ಪಿಗೆ ಪಡೆಯದೆ ಬಡ್ತಿಗೆ ಸಂಬಂಧಿಸಿದ ಪ್ರಸ್ತಾವವನ್ನು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಕಾನೂನು ಇಲಾಖೆ ಕಳೆದ ತಿಂಗಳ 9ರಂದು ತನ್ನ ಅಭಿಪ್ರಾಯವನ್ನು ತಿಳಿಸಿದೆ. ಆದರೆ ಹೈಕೋರ್ಟ್ ಇದೇ 8ರಂದು ಯಥಾಸ್ಥಿತಿಯನ್ನು ಕಾಪಾಡುವಂತೆ ಸೂಚಿಸಿದೆ. ಆದರೆ ಇದನ್ನು ಲೆಕ್ಕಿಸದೆ ಬಡ್ತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಆರು ಜನ ಮುಖ್ಯ ಎಂಜಿನಿಯರ್‌ಗಳಿಗೆ ಸುಮಾರು ಒಂದು ವರ್ಷದಿಂದ ಹುದ್ದೆ ನೀಡದ ಕಾರಣ ಅವರೆಲ್ಲ ಮನೆಯಲ್ಲಿ ಕುಳಿತು ಸಂಬಳ ಪಡೆಯುತ್ತಿದ್ದಾರೆ. ಅವರಿಗೆ ಹುದ್ದೆ ನೀಡಲು ಹಿಂದೆ ಮುಂದೆ ನೋಡುವ ಸರ್ಕಾರ, ಬಡ್ತಿ ನೀಡಲು ಆಸಕ್ತಿ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.