ADVERTISEMENT

ವದಂತಿ: ಹವಳ ಜಜ್ಜಿದ ಮಹಿಳೆಯರು

ತಾಳಿಯ ಕೆಂಪು ಹವಳಗಳು ಮಾತನಾಡುತ್ತವಂತೆ...

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 20:22 IST
Last Updated 5 ಜುಲೈ 2017, 20:22 IST
ಹವಳಗಳನ್ನು ಜಜ್ಜಿರುವ ಮಹಿಳೆಯರು
ಹವಳಗಳನ್ನು ಜಜ್ಜಿರುವ ಮಹಿಳೆಯರು   

ಬೆಂಗಳೂರು: ‘ತಾಳಿಯಲ್ಲಿರುವ ಕೆಂಪು ಹವಳಗಳು ಮಾತನಾಡುತ್ತವಂತೆ, ಗಂಡಂದಿರು ಸಾಯ್ತಾರಂತೆ...!’– ಎನ್ನುವ ವದಂತಿ ನಂಬಿದ ಮಹಿಳೆಯವರು ಮಾಂಗಲ್ಯ ಸರದಲ್ಲಿದ್ದ ಕೆಂಪು ಹವಳ ಜಜ್ಜಿ ಹಾಕಿದ ಘಟನೆ ಮಂಗಳವಾರ ರಾತ್ರಿ ವಿವಿಧ ಜಿಲ್ಲೆಗಳಲ್ಲಿ ನಡೆದಿದೆ.

ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಬಾಗಲಕೋಟೆ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಹರಡಿದ ಈ ವದಂತಿಯನ್ನು ನಂಬಿದ ಮಹಿಳೆಯರು, ಭಯದಿಂದ ಹವಳ ಒಡೆದು ಹಾಕಿದ್ದಾರೆ.

ಮಂಗಳವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಮಾಹಿತಿ ದೂರವಾಣಿ ಮೂಲಕ ವಿವಿಧ ಜಿಲ್ಲೆಗಳಿಗೆ ವ್ಯಾಪಿಸಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ನಿದ್ದೆಗೆಟ್ಟ ಮಹಿಳೆಯರು: ವದಂತಿ ಹರಡಿದ್ದರಿಂದ ಮಹಿಳೆಯರು ರಾತ್ರಿ ಜಾಗರಣೆ ಮಾಡಿದರು. ರಾಯಚೂರು ಜಿಲ್ಲೆಯ ಸಿಂಧನೂರು, ಲಿಂಗಸುಗೂರು, ಕೊಪ್ಪಳ ಜಿಲ್ಲೆ ಗಂಗಾವತಿ, ಕುಷ್ಟಗಿ ತಾಲ್ಲೂಕುಗಳ ಹಳ್ಳಿಗಳಲ್ಲಿ ಜನರು ಹೆಚ್ಚಾಗಿ ಈ ವಿಷಯವನ್ನು ಚರ್ಚಿಸುತ್ತಿದ್ದಾರೆ.

ಗೂಗಿಬಂಡೆಯಲ್ಲಿ ಶಾರದಾ ಎನ್ನುವರು ಮಂಗಳವಾರ ಮಧ್ಯರಾತ್ರಿ ನಿದ್ದೆಯ ಮಂಪರಿನಲ್ಲಿ ಕೆಂಪು ಹವಳದ ಬದಲು ಬಂಗಾರದ ಗುಂಡುಗಳನ್ನು ಕುಟ್ಟಿ ಪುಡಿ ಮಾಡಿ, ನಂತರ ಕಣ್ಣೀರಿಟ್ಟರು.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಳಕಲ್‌, ಬೂದಿಹಾಳ, ಕರಡಿ, ತಾರಿಹಾಳ, ಬಾಗಲಕೋಟೆ ತಾಲ್ಲೂಕಿನ ನವನಗರ ಸೇರಿದಂತೆ ವಿವಿಧೆಡೆ ಬಹಳಷ್ಟು ಮಂದಿ ತಮ್ಮ ಕೊರಳಲ್ಲಿನ ತಾಳಿ ತೆಗೆದು ಅದರಲ್ಲಿನ ಕೆಂಪು ಹವಳವನ್ನು ಕಲ್ಲಿನಿಂದ ಜಜ್ಜಿ ಹಾಕಿದರು. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಕೂಡ್ಲಿಗಿ, ಕಂಪ್ಲಿ, ಕೊಟ್ಟೂರು ಹಾಗೂ ಸಂಡೂರಿನಲ್ಲಿಯೂ ವದಂತಿ ಹಬ್ಬಿತ್ತು.
*
ತಾಳಿಯಲ್ಲಿದ್ದ ಹವಳಗಳನ್ನು ಜಜ್ಜುವುದರಿಂದ ಗಂಡನಿಗೆ ರಕ್ಷಣೆ ಇದೆ ಎನ್ನುವುದು ಮೂಢನಂಬಿಕೆ.
ಶಿವಮೂರ್ತಿ ಮುರುಘಾ ಶರಣರು,
ಮುರುಘಾ ಮಠ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT