ಮಡಿಕೇರಿ: ಜೀವ ವೈವಿಧ್ಯದ ಅತ್ಯಂತ ಸೂಕ್ಷ್ಮ ತಾಣವೆಂದು ಯುನೆಸ್ಕೊದಿಂದ ಗುರುತಿಸಿಕೊಂಡ ಕೊಡಗು ಜಿಲ್ಲೆಯಲ್ಲಿ ಈಗ ಪ್ರಾಣಿ–ಪಕ್ಷಗಳ ಸಂಕುಲದ ಮೇಲೆ ‘ಹೈಟೆನ್ಷನ್ ವಿದ್ಯುತ್ ತಂತಿ’ ತೂಗುಕತ್ತಿಯಂತೆ ನೇತಾಡುತ್ತಿದೆ.
ಮೈಸೂರು–ಕೋಯಿಕ್ಕೋಡ್ ಹೈಟೆನ್ಷನ್ 400 ಕೆವಿ ವಿದ್ಯುತ್ ತಂತಿ ಮಾರ್ಗವು ದಕ್ಷಿಣ ಕೊಡಗಿನ ಅರಣ್ಯ ಪ್ರದೇಶ ಹಾಗೂ ಕಾಫಿ ತೋಟಗಳ ಮೂಲಕ ಹಾದುಹೋಗಲಿದೆ. ಈ ಮಾರ್ಗದಲ್ಲಿ ಅನೇಕ ಕಾಡುಪ್ರಾಣಿಗಳು ಹಾಗೂ ಪಕ್ಷಿಗಳು ವಾಸವಾಗಿವೆ. ವಿದ್ಯುತ್ ತಂತಿ ಮಾರ್ಗ ನಿರ್ಮಿಸಲು ಮರಗಳನ್ನು ಕತ್ತರಿಸಿದರೆ ಪ್ರಾಣಿ– ಪಕ್ಷಿಗಳು ನೆಲೆ ಕಳೆದುಕೊಳ್ಳುತ್ತವೆ.
ದಕ್ಷಿಣ ಕೊಡಗಿನ ಪಕ್ಕದಲ್ಲಿರುವ ನಾಗರಹೊಳೆ ವನ್ಯಜೀವಿ ಧಾಮದಲ್ಲಿ ಆನೆ, ಹುಲಿ, ಚಿರತೆ, ಕಾಡು ನರಿ, ಜಿಂಕೆ ಸೇರಿದಂತೆ ವಿವಿಧ ಕಾಡುಪ್ರಾಣಿಗಳು ವಾಸವಾಗಿವೆ. ಕಾಫಿ ತೋಟಗಳಲ್ಲಿ ಅಪಾರ ಸಂಖ್ಯೆಯ ಮರಗಳು ಹಾಗೂ ಆಳೆತ್ತರದ ಕಾಫಿ ಗಿಡಗಳು ಇರುವುದರಿಂದ ಪ್ರಾಣಿಗಳು ನೆಲೆಯೂರುತ್ತವೆ. ಕಾಫಿ ತೋಟಗಳಲ್ಲಿರುವ ಮರಗಳನ್ನು ಕತ್ತರಿಸಿದರೆ ನೆಲೆ ಕಳೆದುಕೊಳ್ಳುವ ಪ್ರಾಣಿಗಳು ಗ್ರಾಮಗಳಿಗೆ ದಾಳಿ ಮಾಡಿದರೆ ಆಶ್ಚರ್ಯವಿಲ್ಲ.
ಅರಣ್ಯ ಪ್ರದೇಶದಲ್ಲಿ ನೀರು, ಆಹಾರದ ಕೊರತೆಯಾಗಿ ಆನೆಗಳು ಹಾಗೂ ಇತರ ಪ್ರಾಣಿಗಳು ಭತ್ತದ ಗದ್ದೆ, ಕಾಫಿ ತೋಟಗಳತ್ತ ಮುಖ ಮಾಡಿವೆ. ಕೆಲವು ಆನೆಗಳು ಎಷ್ಟೋ ವರ್ಷಗಳಿಂದ ಕಾಫಿ ತೋಟಗಳಲ್ಲಿಯೇ ವಾಸ್ತವ್ಯ ಹೂಡಿವೆ. ತೋಟಗಳಲ್ಲಿರುವ ಕಾಫಿ ಗಿಡಗಳನ್ನು ಹಾಗೂ ಇತರ ಜಾತಿಯ ದೊಡ್ಡ ಮರಗಳನ್ನು ಕಡಿದರೆ ಅವುಗಳ ಜೀವನ ಕ್ರಮ ಬದಲಾಗುತ್ತದೆ ಎನ್ನುವ ಆತಂಕ ಕೂರ್ಗ್ ವೈಲ್ಡ್‌ಲೈಫ್ ಸೊಸೈಟಿ ಅಧ್ಯಕ್ಷ ಸಿ.ಪಿ. ಮುತ್ತಣ್ಣ ಅವರದು.
ನಾಗರಹೊಳೆ ವನ್ಯಜೀವಿ ಧಾಮದಿಂದ ಬ್ರಹ್ಮಗಿರಿ ಪರ್ವತ ಶ್ರೇಣಿಗಳತ್ತ ಆನೆಗಳು ಪ್ರಯಾಣಿಸುವ ಆನೆ ಪಥ (ಎಲಿಫಂಟ್ ಕಾರಿಡಾರ್) ಕುಟ್ಟ ಬಳಿ ಹಾದುಹೋಗಿದೆ. ಈ ಜಾಗದಲ್ಲಿ ಹೈಟೆನ್ಷನ್ ತಂತಿ ಮಾರ್ಗ ಕೂಡ ಹಾದುಹೋಗಲಿದೆ. ಇಲ್ಲಿ ಕಾಮಗಾರಿ ನಡೆಸಿದರೆ, ಆನೆಗಳ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ. ಆಗ ಅವು ಗ್ರಾಮಗಳಿಗೆ ನುಗ್ಗುವ ಸಾಧ್ಯತೆ ಇದೆ. ಆನೆ–ಮಾನವ ಸಂಘರ್ಷಕ್ಕೆ ಇನ್ನಷ್ಟು ಎಡೆಮಾಡಿಕೊಡಲಿದೆ ಎಂದು ಅವರು ವಿವರಿಸಿದರು.
ತಂತಿಯಲ್ಲಿ ವಿದ್ಯುತ್ ಹರಿಯುತ್ತಿರುವುದರ ಬಗ್ಗೆ ಸೂಚನೆ ಕೊಡಲು ‘ಅಲ್ಟ್ರಾ ಸೌಂಡ್ ಸಿಗ್ನಲ್ ಫ್ಲ್ಯಾಷ್ ಲೈಟ್’ಗಳನ್ನು ಗೋಪುರಗಳ ಮೇಲೆ ಅಳವಡಿಸುತ್ತಾರಂತೆ. ಈ ಫ್ಲ್ಯಾಷ್ ಲೈಟುಗಳು ಆನೆಗಳ ಕಣ್ಣಿಗೆ ಕುಕ್ಕುವ ಸಾಧ್ಯತೆ ಇದೆ. ಇದರಿಂದಲೂ ಆನೆಗಳು ವಿಚಲಿತಗೊಳ್ಳುವ ಸಾಧ್ಯತೆ ಹೆಚ್ಚು ಎಂದರು.
ಕೊಡಗಿನ ಭಾಗದಲ್ಲಿ ಆನೆಗಳ ವಾಸಸ್ಥಾನ ಇರುವುದರಿಂದ ಹಾಗೂ ಆನೆಗಳ ಜೀವನಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಂಭವ ಇರುವುದರಿಂದ ವಿದ್ಯುತ್ ತಂತಿಯನ್ನು ಬೇರೆ ಮಾರ್ಗದಲ್ಲಿ ಕೊಂಡೊಯ್ಯಬೇಕೆಂದು ಆನೆ ತಜ್ಞ ಸುಕುಮಾರನ್ (ಪರ್ಯಾಯ ವಿದ್ಯುತ್ ಮಾರ್ಗದ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ತಾಂತ್ರಿಕ ತಜ್ಞರ ಸಮಿತಿಗೆ ಸುಕುಮಾರನ್ ಅಧ್ಯಕ್ಷರಾಗಿದ್ದಾರೆ) ಅವರು ಜನವರಿಯಲ್ಲಿ ಕೇಂದ್ರ ಪರಿಸರ ಖಾತೆ ಸಚಿವ ಎಂ. ವೀರಪ್ಪ ಮೊಯಿಲಿ ಅವರಿಗೆ ಪತ್ರ ಬರೆದಿದ್ದರು ಎಂದು ಸಿ.ಪಿ. ಮುತ್ತಣ್ಣ ಸ್ಮರಿಸಿದರು.
ಆನೆ ಪಥಕ್ಕೆ ತೊಂದರೆಯಿಲ್ಲ: ಪವರ್‌ಗ್ರಿಡ್ ಸ್ಪಷ್ಟನೆ
ಕೂರ್ಗ್ ವೈಲ್ಡ್‌ಲೈಫ್ ಸೊಸೈಟಿಯವರು ಎತ್ತಿರುವ ಪ್ರಶ್ನೆಗಳ ಕುರಿತು ಪವರ್‌ಗ್ರಿಡ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಸಿ.ಡಿ. ಕಿಶೋರ್ ಅವರನ್ನು ಸಂಪರ್ಕಿಸಿದಾಗ, ವನ್ಯಜೀವಿಗಳ ಸುರಕ್ಷತೆಯ ಬಗ್ಗೆ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಹಲವು ಆನೆಗಳು ವಿದ್ಯುತ್ ತಂತಿ ಸ್ಪರ್ಶದಿಂದ ಸಾವಿಗೀಡಾಗಿದ್ದವು. ಆನೆಯು ಸೊಂಡಿಲನ್ನು ಮೇಲಕ್ಕೆ ಎತ್ತಿದರೂ ನಿಲುಕಬಾರದೆಂದು ವಿದ್ಯುತ್ ತಂತಿಯನ್ನು ಭೂಮಿಯ ಮೇಲಿನಿಂದ 15 ಮೀಟರ್ ಎತ್ತರದಲ್ಲಿ ಅಳವಡಿಸಲಾಗುತ್ತಿದೆ. ಸಾಮಾನ್ಯವಾಗಿ ವಿದ್ಯುತ್ ತಂತಿಯನ್ನು 9 ಮೀಟರ್ ಎತ್ತರದಲ್ಲಿ ಅಳವಡಿಸಲಾಗುತ್ತಿತ್ತು. ಕೊಡಗಿನಲ್ಲಿ ಆನೆಗಳ ಸಂಚಾರವಿರುವುದನ್ನು ಗಮನದಲ್ಲಿಟ್ಟುಕೊಂಡು ಎತ್ತರವನ್ನು 15 ಮೀಟರ್‌ವರೆಗೆ ಹೆಚ್ಚಿಸಲಾಗಿದೆ. ಆನೆ ಪಥಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದು ಎಂದು ಉತ್ತರಿಸಿದರು.
ವಿದ್ಯುತ್ ತಂತಿ ಮಾರ್ಗ ನಿರ್ಮಾಣವಾದ ನಂತರ ಒಂದೆರಡು ವರ್ಷ ಕಳೆಯುವಷ್ಟರಲ್ಲಿ ಮಾರ್ಗದ ಉದ್ದಕ್ಕೂ ಸಣ್ಣ ಗಿಡ–ಮರಗಳು ಸಹಜವಾಗಿಯೇ ಬೆಳೆಯುತ್ತವೆ. ಕಾಫಿ ಗಿಡಗಳನ್ನೂ ಬೆಳೆಸಬಹುದು. ಆಗ ಮೊದಲು ಇದ್ದಂತೆ ಕಾಡು ರೂಪುಗೊಳ್ಳುತ್ತದೆ. ಪ್ರಾಣಿಗಳ ಆತಂಕವೂ ದೂರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಂತಿಯಲ್ಲಿ ವಿದ್ಯುತ್ ಪ್ರವಹಿಸಿದಾಗ ವಿಕಿರಣಗಳು ಹೊರಹೊಮ್ಮುತ್ತವೆ ಎನ್ನುವುದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ದಾಖಲೆಗಳಿಲ್ಲ. ವಿದ್ಯುತ್ ತಂತಿ ಮೇಲೆ ಕುಳಿತರೂ ಪಕ್ಷಿಗಳಿಗೆ ಯಾವುದೇ ರೀತಿಯ ಅಪಾಯವಾಗಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.