ADVERTISEMENT

ವರ್ಗಾವಣೆ ಕೋರಿಕೆಗೆ ಸಿಗದ ಮಾನ್ಯತೆಗೆ ಆಕ್ಷೇಪ

ಶಾಸಕಾಂಗ ಸಭೆಯಲ್ಲಿ ಶಾಸಕರ ಸಿಟ್ಟು

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST

ಬೆಂಗಳೂರು: ಅಧಿಕಾರಿಗಳ ವರ್ಗಾವಣೆ ಮತ್ತಿತರ ವಿಷಯಗಳಲ್ಲಿ ತಮ್ಮ ಕೋರಿಕೆಗಳಿಗೆ ಸೂಕ್ತ ಮಾನ್ಯತೆ ದೊರೆಯುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಸಚಿವರು ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಇವರು ಶಾಸಕಾಂಗ ಪಕ್ಷದ ಸಭೆಯಲ್ಲೇ ದೂರಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವು ಶಾಸಕರು, ವರ್ಗಾವಣೆ ವಿಷಯದಲ್ಲಿ ಸಚಿವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಚಿವರು ಶಾಸಕರಿಗೆ ಸರಿಯಾಗಿ ಗೌರವ ನೀಡುತ್ತಿಲ್ಲ ಎಂಬುದಾಗಿಯೂ ಕೆಲವರು ದೂರಿದ್ದಾಗಿ ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಅನುದಾನ ಒದಗಿಸಿಲ್ಲ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಅವಧಿಯನ್ನು ವಿಸ್ತರಿಸುವಂತೆಯೂ ಕೆಲವರು ಒತ್ತಾಯಿಸಿದ್ದಾರೆ ಎಂದು ಗೊತ್ತಾಗಿದೆ. ಅನ್ನಭಾಗ್ಯ ಯೋಜನೆ ಅನುಷ್ಠಾನದಲ್ಲಿ ಲೋಪ ಆಗುತ್ತಿದೆ ಎಂದೂ ಕೆಲವರು ಪ್ರಸ್ತಾಪಿಸಿದ್ದಾರೆ. ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಹೆಚ್ಚು ದರ ಪಡೆಯುತ್ತಿರುವುದು, ಸಕಾಲಕ್ಕೆ ಅಕ್ಕಿ ವಿತರಿಸದೇ ಇರುವುದು ಮತ್ತಿತರ ಸಮಸ್ಯೆಗಳಿಂದ ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗಿದೆ ಎಂದು ದೂರಿದ್ದಾರೆ.

ಸಚಿವರು ಸದನಕ್ಕೆ ಗೈರಾಗುತ್ತಿರುವ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಕೆ.ಆರ್.ರಮೇಶ್ ಕುಮಾರ್ ಈ ಸಂಬಂಧ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದನದಲ್ಲಿ ಹಾಜರಿರುವುದಕ್ಕಿಂದ ಮಹತ್ವದ ಕೆಲಸ ಯಾವುದು ಇರುತ್ತದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರು ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಈ ಬಾರಿ ಹೆಚ್ಚು ಅನುದಾನ ಒದಗಿಸಲು ಸಾಧ್ಯವಾಗಿಲ್ಲ ಎಂದು ಮನವರಿಕೆ ಮಾಡಲು ಯತ್ನಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಶಾಸಕರ ಎಲ್ಲಾ ಬೇಡಿಕೆಗಳನ್ನೂ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಪರಮೇಶ್ವರ್ ಭಾಗಿ: ಮುಖ್ಯಮಂತ್ರಿ ಜೊತೆ ಮುನಿಸಿಕೊಂಡು ಶಾಸಕಾಂಗ ಪಕ್ಷದ ಸಭೆಗಳಿಂದ ದೂರ ಉಳಿದಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಬುಧವಾರದ ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಜೊತೆ ತಮಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪ್ರತಿಪಕ್ಷಗಳು ಒಡಕು ಮೂಡಿಸಲು ಯತ್ನಿಸುತ್ತಿವೆ ಎಂದು ಅವರು ನಂತರ ಸಮಜಾಯಿಷಿ ನೀಡಿದರು.

`ನಾವು ಒಗ್ಗಟ್ಟಾಗಿಯೇ ಇದ್ದೇವೆ. ನಮ್ಮ ನಡುವೆ ಯಾವ ಭಿನ್ನಮತವೂ ಇಲ್ಲ. ಎಲ್ಲಾ ಶಾಸಕರೂ ಮುಖ್ಯಮಂತ್ರಿಯವರ ಬೆಂಬಲಕ್ಕೆ ನಿಲ್ಲಬೇಕು. ಪಕ್ಷದ ಮುಖಂಡರಾಗಲೀ, ಶಾಸಕರಾಗಲೀ ಸರ್ಕಾರ ಅಥವಾ ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆಗಳನ್ನು ನೀಡಬಾರದು. ಆ ರೀತಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.