ADVERTISEMENT

ವರ್ತೂರಿಗೆ ಮಂತ್ರಿಗಿರಿ ಚಿಂತೆ!

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ಕೋಲಾರ: ಬಂಗಾರಪೇಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯು ಇಡೀ ಜಿಲ್ಲೆಯ ರಾಜಕಾರಣದ ನಿದ್ದೆಗೆಡಿಸಿದೆ. ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ, ಈಗ ಆ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಂ.ನಾರಾಯಣಸ್ವಾಮಿಯವರನ್ನು ಸೋಲಿಸುವುದು ಹೇಗೆ ಎಂಬುದು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಚಿಂತೆಯಾಗಿದೆ. ಆದರೆ, ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿರುವ ಪಕ್ಷೇತರ ಶಾಸಕ ಆರ್.ವರ್ತೂರು ಪ್ರಕಾಶರು ಮಾತ್ರ ಮಂತ್ರಿಗಿರಿ ಗಿಟ್ಟಿಸಿಕೊಳ್ಳುವ ಚಿಂತೆಯಲ್ಲಿದ್ದಾರೆ.

ಈ ನಡುವೆ, ಎರಡೂ ಪಕ್ಷದಲ್ಲಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಅವರನ್ನು ಸ್ಥಳೀಯ ಮುಖಂಡರು ಸಂಭಾಳಿಸುತ್ತಿರುವಾಗಲೇ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧ್ಯತೆಯೂ ಗೋಚರಿಸಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ, ಬಂಗಾರಪೇಟೆಯಲ್ಲಿ ಕಾಂಗ್ರೆಸ್‌ಗೆ ಸ್ಥಾನ ಖಚಿತಪಡಿಸಿಕೊಳ್ಳುವ ಸಲುವಾಗಿ ‘ಡಮ್ಮಿ ಅಭ್ಯರ್ಥಿ’ಗಳನ್ನು ಕಣಕ್ಕೆ ಇಳಿಸುವ ಮೈತ್ರಿ ಮಾತುಕತೆ ದೊಡ್ಡವರ ಮಟ್ಟದಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸೋಲಿನ ಪಾಠ: ಕಾಂಗ್ರೆಸ್‌ನಲ್ಲಿ, ಪಕ್ಷ ಗೆಲ್ಲುವುದಕ್ಕಿಂತಲೂ, ಪಕ್ಷ ತೊರೆದು ಹೋದ ನಾರಾಯಣಸ್ವಾಮಿಯವರಿಗೆ ಸೋಲಿನ ಪಾಠ ಕಲಿಸುವ ಹಠವೇ ದೊಡ್ಡದಾಗಿದೆ. ಆಕಾಂಕ್ಷಿಗಳ ಅಭಿಪ್ರಾಯ ಪಡೆಯುವ ಸಲುವಾಗಿ ಮಂಗಳವಾರ ನಗರದ ತಮ್ಮ ನಿವಾಸಕ್ಕೆ ವೀಕ್ಷಕರಾದ ಬಿ.ಎಲ್.ಶಂಕರ್, ಕೆ.ಜೆ.ಜಾರ್ಜ್ ಮತ್ತು ಶಿವಮೂರ್ತಿಯವರು ಬಂದು ಹೋದ ಬಳಿಕ, ಸುದ್ದಿಗಾರರೊಡನೆ ಮಾತನಾಡಿದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಪಾಠ ಕಲಿಸುವ ಮಾತನಾಡಿದ್ದಾರೆ.

ಅವರಿಗೆ ಅದೊಂದು ವೈಯಕ್ತಿಕ ತುರ್ತು ಕೂಡ ಆಗಿದೆ. ಏಕೆಂದರೆ, ಕಾಂಗ್ರೆಸ್ ತೊರೆದ ಸಂದರ್ಭದಲ್ಲಿ ನಾರಾಯಣಸ್ವಾಮಿ, ‘ಮುನಿಯಪ್ಪನವರ ದಬ್ಬಾಳಿಕೆಯ ಕಾರಣ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿತ್ತು. ಅದಕ್ಕೆ ಬಿಜೆಪಿ ಸೇರಿದೆ’ ಎಂದು ಹೇಳಿಕೆ ನೀಡಿದ್ದರು.

ದೊಡ್ಡವರ ಮಾತು: ಕಾಂಗ್ರೆಸ್ ತೊರೆದು ಬಂದ ಕೂಡಲೇ ಪ್ರಮುಖ ಸ್ಥಾನ ಅಲಂಕರಿಸಿರುವ, ಮಾಜಿ ಸಚಿವ ಕೆ.ಶ್ರೀನಿವಾಸಗೌಡರಿರುವ ಜೆಡಿಎಸ್‌ನಲ್ಲಿ ‘ದೊಡ್ಡವರ’ ಮಾತಿಗೆ ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೆಚ್ಚು ಪ್ರತಿರೋಧವಿಲ್ಲದೆ ತಮ್ಮ ಮಾತು ಕೇಳುವ ಬಹುತೇಕ ಆಕಾಂಕ್ಷಿಗಳ ಜೊತೆಗೆ ಮಾತುಕತೆ ನಡೆಸಿರುವ ಗೌಡರು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರ ಆಣತಿಗಾಗಿ ಕಾಯುತ್ತಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸೂಚನೆ ದೊರೆತ ಬಳಿಕ ಅವರು ಜಿಲ್ಲಾ ಘಟಕದ ಅಧ್ಯಕ್ಷ, ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮತ್ತಿತರರೊಡನೆ ಬುಧವಾರ ಬೆಂಗಳೂರಿಗೆ ತೆರಳಿದ್ದರು.

ಮಂತ್ರಿಗಿರಿ: ನಿರ್ಣಾಯಕ ಗಳಿಗೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಹಲವು ತಿಂಗಳಿಂದ ಮಂತ್ರಿಗಿರಿಗಾಗಿ ಕಾಯುತ್ತಲೇ ಇರುವ ಇಲ್ಲಿನ ಶಾಸಕ ಆರ್.ವರ್ತೂರು ಪ್ರಕಾಶ್ ಅವರ ನಿರೀಕ್ಷೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ, ಮತ್ತೆ ಅಲುಗಾಡತೊಡಗಿದೆ.

ಆಪರೇಷನ್ ಕಮಲಕ್ಕೆ ಒಳಗಾಗಿರುವ ನಾರಾಯಣಸ್ವಾಮಿ ಗೆದ್ದರೆ ಅವರಿಗೆ ಸಚಿವ ಸ್ಥಾನ ದೊರಕಬಹುದು ಎಂಬ ಊಹೆ ಬಿಜೆಪಿಯ ಅಧಿಕೃತ ಘೋಷಣೆಯಂತೆ ಕ್ಷೇತ್ರದಲ್ಲಿ ಹರಡಿದೆ. ಅಲ್ಲದೆ, ಈ ಸನ್ನಿವೇಶ ಶಾಸಕರಲ್ಲಿ ಅಳುಕನ್ನೂ ಮೂಡಿಸಿರುವ ಸಾಧ್ಯತೆ ಇದೆ. ಹೀಗಾಗಿ ವರ್ತೂರು, ಮುಖ್ಯಮಂತ್ರಿಯವರನ್ನು ಗುರುವಾರ ಭೇಟಿ ಮಾಡಲು ನಿರ್ಧರಿಸಿದ್ದಾರೆ. ‘ಒಂದೆರಡು ದಿನದಲ್ಲಿ ನನ್ನ ಮಂತ್ರಿಗಿರಿ ವಿಚಾರ ಇತ್ಯರ್ಥಗೊಳ್ಳಲಿದೆ’ ಎಂಬುದು ಅವರ ವಿಶ್ವಾಸದ ನುಡಿ.

ಇಷ್ಟೆಲ್ಲದ್ದರ ನಡುವೆ, ಕಾಂಗ್ರೆಸ್-ಜೆಡಿಎಸ್ ತಮ್ಮ ಅಭ್ಯರ್ಥಿಗಳಿಗಾಗಿ ಇನ್ನೂ ಹುಡುಕಾಟ ನಡೆಸುತ್ತಿವೆ. ಚುನಾವಣೆ ಅಧಿಸೂಚನೆ ಹೊರಬಿದ್ದ ದಿನವೇ ನಾಮಪತ್ರ ಸಲ್ಲಿಸಿರುವ ಬಿಜೆಪಿಯ ಎಂ.ನಾರಾಯಣಸ್ವಾಮಿ ಮಾತ್ರ ಚುನಾವಣೆಗೆ ಮುನ್ನವೇ ಗೆಲುವಿನ ಕುದುರೆ ಏರಿದ ಸಂಭ್ರಮದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.