ADVERTISEMENT

ವಾಡಿಕೆಗಿಂತ ಹೆಚ್ಚು ಮಳೆ- ಹಾರಂಗಿ ಜಲಾಶಯ ಭರ್ತಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 19:59 IST
Last Updated 1 ಜುಲೈ 2013, 19:59 IST

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಅಣೆಕಟ್ಟೆ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಸೋಮವಾರ ಒಂದು ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

ಜಲಾಶಯದ ನೀರಿನ ಮಟ್ಟವನ್ನು 2,857 ಅಡಿಗೆ ಕಾಯ್ದಿಟ್ಟುಕೊಂಡು, ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಸೋಮವಾರ ಬೆಳಿಗ್ಗೆ 10.30ಕ್ಕೆ 400 ಕ್ಯೂಸೆಕ್ ನೀರು  ಹರಿಸಲಾಗಿತ್ತು. ಒಳಹರಿವು ಹೆಚ್ಚಿದ ಪರಿಣಾಮ ನೀರು ಹರಿಸುವುದನ್ನು ಸಂಜೆ ಸಾವಿರ ಕ್ಯೂಸೆಕ್‌ಗೆ ಏರಿಕೆ ಮಾಡಲಾಯಿತು.

ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ಹಾರಂಗಿ ಒಳಹರಿವು ಹೆಚ್ಚಿದೆ. ಹಾರಂಗಿ ಜಲಾಶಯವು ಗರಿಷ್ಠ 2,859 ಅಡಿ ಇದ್ದು, ಸೋಮವಾರ ಸಂಜೆಯ ವರದಿಯಂತೆ 2,857.44 ಅಡಿ ನೀರು ಸಂಗ್ರಹವಾಗಿದೆ.

ಒಟ್ಟು 8 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಈವರೆಗೆ 7.65 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಎರಡು ದಿನಗಳ ಮೊದಲೇ ಹಾರಂಗಿಯಿಂದ ನದಿಗೆ ನೀರುಹರಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, 4-5 ದಿನಗಳಿಂದ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕ್ಷೀಣಿಸಿರುವುದರಿಂದ ಒಳಹರಿವಿನ ಪ್ರಮಾಣದ ಕಡಿಮೆಯಾಗಿತ್ತು. ಹೀಗಾಗಿ, ಎರಡು ದಿನ ತಡವಾಗಿ ಅಂದರೆ ಸೋಮವಾರ ಹಾರಂಗಿಯಿಂದ ನದಿಗೆ ನೀರು ಹರಿಸಲಾಯಿತು. ಸೋಮವಾರ ಬೆಳಿಗ್ಗೆ 8.30ರ ವರದಿಯಂತೆ 3,600 ಕ್ಯೂಸೆಕ್ ಒಳಹರಿವು ಇದೆ.

`ಕಳೆದ ವರ್ಷ ಮುಂಗಾರು ಒಂದು ತಿಂಗಳು ತಡವಾಗಿ ಆರಂಭವಾಗಿತ್ತು. ಹೀಗಾಗಿ ಹಾರಂಗಿ ಜಲಾಶಯವು ಆಗಸ್ಟ್ ತಿಂಗಳಿನಲ್ಲಿ ತುಂಬಿತ್ತು. ಆದರೆ, ಈ ಬಾರಿ ಮುಂಗಾರು ಬೇಗ ಆರಂಭವಾಗಿ, ಉತ್ತಮ ಮಳೆಯಾಗಿರುವುದರಿಂದ ಜೂನ್ ಕೊನೆ ವಾರದಲ್ಲೇ ಭರ್ತಿಯಾಗಿದೆ ಎಂದು ಹಾರಂಗಿ ಜಲಾಶಯ ಕಾರ್ಯಪಾಲಕ ಎಂಜಿನಿಯರ್ ಸಿದ್ದರಾಜು  ಹೇಳಿದರು.

ಹಾರಂಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಾಲನೇತ್ರಯ್ಯ ಮಾತನಾಡಿ, `ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣದ ನೀರನ್ನು ಮಾತ್ರ ನದಿಗೆ ಹರಿದು ಬಿಡಲಾಗುತ್ತಿದೆ. ಆದರೆ, ಯಾವುದೇ ಕಾಲುವೆಗಳಿಗೆ ನೀರು ಬಿಡುತ್ತಿಲ್ಲ. ನೀರಾವರಿ ಸಲಹಾ ಸಮಿತಿ ಸಭೆಯು ಜುಲೈ 15ರ ಒಳಗೆ ನಡೆಯಲಿದ್ದು, ನಂತರ ಕಾಲುವೆಗಳಿಗೆ ನೀರು ಹರಿಸಲಾಗುವುದು. ಮಳೆಯ ಪ್ರಮಾಣ ಕಳೆದೆರಡು ದಿನಗಳಿಂದ ಕಡಿಮೆಯಾಗಿದ್ದು, ಮಳೆ ಹೆಚ್ಚಾದರೆ ಮಾತ್ರ ನದಿಗೆ ನೀರು ಹರಿಸುವುದನ್ನು ಮುಂದುವರಿಸುತ್ತೇವೆ. ಇಲ್ಲದಿದ್ದರೆ ತಕ್ಷಣ  ನಿಲ್ಲಿಸುತ್ತೇವೆ' ಎಂದು ತಿಳಿಸಿದರು.

ಕಾಲುವೆಗಳಿಗೆ ನೀರು ಹರಿಸಿದರೆ ಕೊಡಗು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ರೈತರಿಗೂ ಇದರಿಂದ ಅನುಕೂಲವಾಗಲಿದ್ದು, ಒಟ್ಟು 1.37 ಲಕ್ಷ ಎಕರೆ ಭೂಮಿಗೆ ನೀರು ಪೂರೈಕೆಯಾಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.