ADVERTISEMENT

ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಇಲ್ಲ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST

ಬೆಂಗಳೂರು: ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಿಸುವ ಯೋಜನೆ ಜಾರಿಯಾಗುವ ಸಾಧ್ಯತೆ ಇಲ್ಲ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಂತಿಮ ಬಜೆಟ್‌ನಲ್ಲಿ  ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ಇದೇ ಶೈಕ್ಷಣಿಕ ವರ್ಷದಿಂದ ಉಚಿತ ಬಸ್‌ ಪಾಸ್‌ ನೀಡುವುದಾಗಿ ಘೋಷಿಸಿತ್ತು. ಆದರೆ, ಸಮ್ಮಿಶ್ರ ಸರ್ಕಾರದ ಸಾರಿಗೆ ಸಚಿವರು ಈ ಯೋಜನೆ ಜಾರಿಯಾಗುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ,‘ಉಚಿತ ಬಸ್‌ ಪಾಸ್‌ ಯೋಜನೆಗೆ ಹಣಕಾಸು ಇಲಾಖೆ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದೆ. ಆದ್ದರಿಂದ, ಈ ಯೋಜನೆಯ ಸಾಧಕ– ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ADVERTISEMENT

‘ವಿವಿಧ ಸಾರಿಗೆ ನಿಗಮಗಳು ಸುಮಾರು ₹ 500 ಕೋಟಿಗಳಷ್ಟು ನಷ್ಟ ಅನುಭವಿಸುತ್ತಿವೆ. ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಯೋಜನೆ ಜಾರಿ ಮಾಡಲು ಸರ್ಕಾರ ಪ್ರತ್ಯೇಕ ಅನುದಾನ ನೀಡಬೇಕಾಗುತ್ತದೆ. ಈ ಯೋಜನೆ ಜಾರಿ ಮಾಡಿದರೆ ಸುಮಾರು ₹ 623 ಕೋಟಿ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

ಈಗಾಗಲೇ ಜಾರಿಯಲ್ಲಿರುವ ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಣೆ ಮುಂದುವರಿಯಲಿದೆ. ವಿದ್ಯಾರ್ಥಿಗಳಿಗೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಕೌಂಟರ್‌ಗಳಲ್ಲಿ ಅಲ್ಲದೆ  ಶಾಲಾ– ಕಾಲೇಜು ಆವರಣದಲ್ಲೂ ಪಾಸ್‌ಗಳನ್ನು ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಶಾಲಾ ಕಾಲೇಜುಗಳಿಗೆ ಶುಲ್ಕ ಪಾವತಿಸಿ ದಾಖಲಾದ ತಕ್ಷಣವೇ ಶಿಕ್ಷಣ ಇಲಾಖೆ ವೆಬ್‌ಸೈಟ್‌ಗೆ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಅಪ್‌ಲೋಡ್‌ ಆಗುತ್ತದೆ. ಶಿಕ್ಷಣ ಇಲಾಖೆಯ ವೆಬ್‌ಸೈಟನ್ನು ಸಾರಿಗೆ ಇಲಾಖೆಗೆ ವೆಬ್‌ಸೈಟ್‌ಗೆ ಜೋಡಣೆ ಮಾಡಲಾಗುವುದು. ಈ ಮಾಹಿತಿಯನ್ನು ಆಧರಿಸಿ ಬಸ್‌ ಪಾಸ್‌ಗಳನ್ನು ವಿತರಿಸಲಾಗುವುದು ಎಂದು ಅವರು ಹೇಳಿದರು.

ಬಸ್ ಪಾಸ್‌ ಶುಲ್ಕ:

ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ₹ 600 ಮತ್ತು ಬಾಲಕರಿಗೆ ₹ 800 ನಿಗದಿ ಮಾಡಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ₹1100 ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳು ಪಾಸ್‌ಗೆ ಹಣ ಪಾವತಿಸಬೇಕಾಗಿಲ್ಲ. ಆದರೆ, ಪ್ರಕ್ರಿಯೆ ಶುಲ್ಕ ₹ 200 ನೀಡಬೇಕು ಎಂದು ತಮ್ಮಣ್ಣ ತಿಳಿಸಿದರು.

ಈ ತಿಂಗಳ ಕೊನೆಯೊಳಗೆ ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ಪಾಸ್‌ಗಳನ್ನು ಮುದ್ರಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.