ADVERTISEMENT

ವಿದ್ಯುತ್ ಪೂರೈಕೆ ಸುಧಾರಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST

ಬೆಂಗಳೂರು: ರಾಜ್ಯದ ಕೆಲವೆಡೆ ಮಳೆಯಾಗಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ಸ್ವಲ್ಪ ಸುಧಾರಣೆಯಾಗಿದೆ. ಬೇಡಿಕೆಯಲ್ಲೂ ಇಳಿಮುಖವಾಗಿದೆ. ಹೀಗಾಗಿ ಮೂರು ದಿನಗಳಿಂದ ಅನಿಯಮಿತ ವಿದ್ಯುತ್ ಕಡಿತ ಮಾಡಿಲ್ಲ.

ಕಳೆದ ವಾರ ಸರಾಸರಿ ನಿತ್ಯ 150 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಕೆಯಾದರೂ ಅನಿಯಮಿತ ಲೋಡ್‌ಶೆಡ್ಡಿಂಗ್ ಜಾರಿಯಲ್ಲಿತ್ತು. ಆದರೆ ಈಗ ಸರಾಸರಿ 130 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಬೇಡಿಕೆಯಲ್ಲಿ ಇಳಿಮುಖವಾಗಿರುವುದರಿಂದ ವಿದ್ಯುತ್ ಸಮಸ್ಯೆ ಗಂಭೀರವಾಗಿಲ್ಲ ಎಂದು ಇಂಧನ ಇಲಾಖೆ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಪವನ ವಿದ್ಯುತ್ ಉತ್ಪಾದನೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಆರು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಸರಾಸರಿ 950ರಿಂದ 1,000 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕೇಂದ್ರ ಜಾಲದಿಂದ 1,300 ಮೆಗಾವಾಟ್ ಲಭ್ಯವಾಗುತ್ತಿದೆ. ಇದರಿಂದಾಗಿ ಭಾನುವಾರ, ಸೋಮವಾರ, ಮಂಗಳವಾರ ಅನಿಯಮಿತ ವಿದ್ಯುತ್ ಕಡಿತ ಮಾಡಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಮುಖ ಜಲವಿದ್ಯುತ್ ಉತ್ಪಾದನಾ ಜಲಾಶಯಗಳಾದ ಲಿಂಗನಮಕ್ಕಿ, ಮಾಣಿ ಮತ್ತು ಸೂಪಾದಲ್ಲಿ ಸದ್ಯಕ್ಕೆ 6,301 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವಷ್ಟು ನೀರಿನಸಂಗ್ರಹವಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 7,831 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವಷ್ಟು ನೀರಿನ ಸಂಗ್ರಹವಿತ್ತು. ಈಗಿರುವ ನೀರಿನಲ್ಲಿ ಬರುವ ಜೂನ್‌ವರೆಗೆ ನಿತ್ಯ 23.25 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ.

ಕೈಗಾರಿಕೆಗಳಿಗೆ ನಿತ್ಯ ಮೂರು ಗಂಟೆ ಕಾಲ ವಿದ್ಯುತ್ ಕಡಿತ ಮಾಡಿ, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹೆಚ್ಚಿನ ವಿದ್ಯುತ್ ಪೂರೈಸುವ ಪ್ರಸ್ತಾವವನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಸದ್ಯಕ್ಕೆ ಕೈಬಿಟ್ಟಿದೆ. ಬೇಡಿಕೆ ಕುಸಿದಿರುವುದರಿಂದ ಕೈಗಾರಿಕೆಗಳಿಗೆ ವಿದ್ಯುತ್ ಕಡಿತ ಮಾಡುವ ಪ್ರಸ್ತಾವವಿಲ್ಲ.
ರೈತರಿಗೂ ನಿತ್ಯ ಆರು ಗಂಟೆ ಕಾಲ ಮೂರು ಫೇಸ್ ವಿದ್ಯುತ್ ಪೂರೈಕೆಯಾಗುತ್ತಿದೆ ಎಂದರು.

18ಕ್ಕೆ ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ
ಬೆಂಗಳೂರು:
ಸಚಿವ ಸಂಪುಟದ ಸಭೆಯನ್ನು ಇದೇ 18ರಂದು ಗುಲ್ಬರ್ಗದಲ್ಲಿ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಸಂಪುಟ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.