ಬೆಂಗಳೂರು: ಕೈಮಗ್ಗ ನೇಕಾರರಿಗೆ ಇರುವ ವಿಮಾ ಸೌಲಭ್ಯವನ್ನು ವಿದ್ಯುತ್ ಮಗ್ಗ ನೇಕಾರರಿಗೂ ವಿಸ್ತರಿಸುವುದಲ್ಲದೆ, ಅದರ ಪ್ರೀಮಿಯಂ ಹಣವನ್ನೂ ಸರ್ಕಾರವೇ ಭರಿಸಲಿದೆ ಎಂದು ಜವಳಿ ಸಚಿವ ಗೋವಿಂದ ಕಾರಜೋಳ ಸೋಮವಾರ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಎನ್.ಎ.ಹ್ಯಾರೀಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಯೋಜನೆಯಿಂದ ಸುಮಾರು 80 ಸಾವಿರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.ಪ್ರಸ್ತುತ ಇರುವ ವಿಮೆ ಸಲುವಾಗಿ ಕೈಮಗ್ಗ ನೇಕಾರರಿಗೆ ತಲಾ ಒಟ್ಟು 80 ರೂಪಾಯಿ ಪಾವತಿಸುತ್ತಿದ್ದು, ಅದರಲ್ಲಿ ಶೇ 50ರಷ್ಟು ಹಣವನ್ನು ಫಲಾನುಭವಿಗಳೇ ಭರಿಸಬೇಕು. ಮುಂದಿನ ವರ್ಷದಿಂದ ಫಲಾನುಭವಿ ಪಾವತಿಸಬೇಕಾದ ಕಂತಿನ ಹಣವನ್ನೂ ಸರ್ಕಾರವೇ ಭರಿಸುವ ಹಾಗೆ ಮಾಡಲಾಗುವುದು. ಇದನ್ನು ವಿದ್ಯುತ್ ಮಗ್ಗದ ನೇಕಾರರಿಗೂ ವಿಸ್ತರಿಸಲಾಗುವುದು ಎಂದು ನುಡಿದರು.
ನೇಕಾರರ ಮಕ್ಕಳಿಗೆ ದ್ವಿತೀಯ ಪಿಯುಸಿವರೆಗೆ ಪ್ರಸ್ತುತ ಶಿಷ್ಯವೇತನ ನೀಡುತ್ತಿದ್ದು, ಅದನ್ನು ಪದವಿ ತರಗತಿವರೆಗೂ ವಿಸ್ತರಿಸಲಾಗುವುದು. ಈ ಸಂಬಂಧ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದರು.1986-87ನೇ ಸಾಲಿನಲ್ಲಿ ಪ್ರತಿ ನೇಕಾರ ಕುಟುಂಬಕ್ಕೆ 7000 ರೂಪಾಯಿ ಸಾಲ ನೀಡಿದ್ದು, ಇನ್ನೂ ಅನೇಕರು ಅದನ್ನು ಪಾವತಿಸಿಲ್ಲ. ಅಸಲು-ಬಡ್ಡಿ ಸೇರಿ ಸುಮಾರು ನಾಲ್ಕು ಕೋಟಿ ರೂಪಾಯಿ ಬಾಕಿ ಇದ್ದು, ಒಮ್ಮೆಗೆ ಎಲ್ಲವನ್ನೂ ಮನ್ನಾ ಮಾಡಬೇಕೆಂದು ಮುಖ್ಯಮಂತ್ರಿಯವರನ್ನು ಕೋರಿದ್ದೇನೆ.
ಅವರು ಒಪ್ಪಿಗೆ ಸೂಚಿಸಿದರೆ ಈ ಸೌಲಭ್ಯವೂ ಅವರಿಗೆ ಒದಗಲಿದೆ ಎಂದು ನುಡಿದರು. ನೇಕಾರರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ನೀಡುತ್ತಿದ್ದು, ಈ ಸಲುವಾಗಿ ಸರ್ಕಾರ 65 ಕೋಟಿ ರೂಪಾಯಿ ಪಾವತಿಸಿದೆ. 20 ಎಚ್.ಪಿ. ವರೆಗಿನ ಫಲಾನುಭವಿಗಳು ಇದರ ಸೌಲಭ್ಯ ಪಡೆಯಬಹುದು ಎಂದರು.
ನೀರು ಸರಬರಾಜಿನಲ್ಲೂ ರಿಯಾಯಿತಿ ನೀಡಬೇಕೆನ್ನುವ ಬೇಡಿಕೆಯನ್ನು ಕಾಂಗ್ರೆಸ್‌ನ ದಿನೇಶ ಗುಂಡೂರಾವ್ ಮಂಡಿಸಿದರು. ನೇಕಾರರಿಗೆ ಹಲವರಿಂದ ಕಿರುಕುಳ ಇದ್ದು, ಅದನ್ನು ತಪ್ಪಿಸಲು ಅವರಿಗೆ ಕೆಲಸದ ಸಮಯ ನಿಗದಿಪಡಿಸಬೇಕು. ಈ ಕೆಲಸ ಬಿಬಿಎಂಪಿಯಿಂದ ಆಗಲಿ ಎಂದರು.
ಸಹಕಾರ ಸಂಸ್ಥೆಗಳಲ್ಲಿ ಸದಸ್ಯರಾದ ನೇಕಾರರಿಗೆ ಶೇ 3ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದನ್ನು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರಿಗೂ ಕೇಂದ್ರ ಸರ್ಕಾರ ವಿಸ್ತರಿಸಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.