ADVERTISEMENT

ವಿದ್ವಾನ್‌ ಬಳ್ಳಾರಿ ವೆಂಕಟೇಶಾಚಾರ್ಯ ನಿಧನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2015, 19:30 IST
Last Updated 8 ಜೂನ್ 2015, 19:30 IST

ಮೈಸೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ‘ಬಳ್ಳಾರಿ ಸೋದರ’ರೆಂದೇ ಖ್ಯಾತರಾಗಿದ್ದ ವಿದ್ವಾನ್‌ ಬಳ್ಳಾರಿ ಎಂ. ವೆಂಕಟೇಶಾಚಾರ್ಯ (84) ಸೋಮವಾರ ಇಲ್ಲಿ ನಿಧನರಾದರು.

ಅವರಿಗೆ ಪತ್ನಿ, ಪುತ್ರರಾದ ಮೈಸೂರು ಆಕಾಶವಾಣಿ ಪ್ರೊಗ್ರಾಂ ಎಕ್ಸಿಕ್ಯುಟಿವ್ ಬಳ್ಳಾರಿ ಎಂ. ರಾಘವೇಂದ್ರ, ಮೋರ್ಚಿಂಗ್‌ ಕಲಾವಿದ ಎಂ. ಗುರುರಾಜ್‌, ಪುತ್ರಿಯರಾದ ಅನಸೂಯಾ ದ್ವಾರಕಾನಾಥ್, ಸುಧಾ ಮಂಜುನಾಥ್‌ ಹಾಗೂ ವಾಣಿ ಸತೀಶ್ ಇದ್ದಾರೆ. ಇವರೆಲ್ಲ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

‘ಬಳ್ಳಾರಿ ಸೋದರ’ರಲ್ಲಿ ಒಬ್ಬರಾಗಿದ್ದ, ವೆಂಕಟೇಶಾಚಾರ್ಯ ಅವರ ಸೋದರ ಶೇಷಗಿರಿ ಆಚಾರ್ಯ  ನಿಧನರಾಗಿ 30 ವರ್ಷಗಳಾಯಿತು. ಮೂಲತಃ ಬಳ್ಳಾರಿಯವರಾದ ವೆಂಕಟೇಶಾಚಾರ್ಯ ಅವರು ಬೆಂಗಳೂರಲ್ಲಿ ನೆಲೆಸಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪಾಠ ಮಾಡುತ್ತ, ಕಛೇರಿ ನೀಡುತ್ತಿದ್ದರು. 1976ರಲ್ಲಿ ಮೈಸೂರಿನ ಆಕಾಶವಾಣಿಗೆ ಕಲಾವಿದರಾಗಿ ಆಯ್ಕೆಯಾದರು. ಆಮೇಲೆ ಮೈಸೂರು ಆಕಾಶವಾಣಿಯ ‘ಎ’ ಟಾಪ್‌ ಗ್ರೇಡ್‌ ಕಲಾವಿದರಾದರು. ಜತೆಗೆ, ಭಕ್ತಿಗೀತೆ, ಭಾವಗೀತೆಗಳಿಗೆ ಸಂಗೀತ ಸಂಯೋಜಿಸಿದರು. ಅಲ್ಲದೆ, ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿದರು.

ಬೆಂಗಳೂರಿನ ಗಾಯನ ಸಮಾಜದಿಂದ ‘ಸಂಗೀತ ಕಲಾರತ್ನ’, ರಾಜ್ಯ ಸರ್ಕಾರದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳ ಜತೆಗೆ, ರಾಜ್ಯದಾದ್ಯಂತ ಹಲವಾರು ಸಂಘ–ಸಂಸ್ಥೆಗಳಿಂದ ಬಿರುದು, ಸನ್ಮಾನಗಳಿಗೆ ಭಾಜನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.