ADVERTISEMENT

ವಿಧಾನಸಭೆ ಚುನಾವಣೆ: ಕಣದಲ್ಲಿ 170 ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST

ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ 2,948 ಅಭ್ಯರ್ಥಿಗಳು  ಕಣದಲ್ಲಿದ್ದಾರೆ. ಈ ಪೈಕಿ 170 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ. ಈ ಬಾರಿ 1,223 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿರುವುದು ವಿಶೇಷವಾಗಿದೆ.

ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಲಭ್ಯವಾಗಿದೆ. ಪಕ್ಷೇತರರನ್ನು ಹೊರತುಪಡಿಸಿ ಮಾನ್ಯತೆ ಪಡೆದ ಏಳು ರಾಜಕೀಯ ಪಕ್ಷಗಳ 893 ಹಾಗೂ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷಗಳ 832 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಾಂಗ್ರೆಸ್‌ನ 224, ಬಿಜೆಪಿಯ 223, ಜೆಡಿಎಸ್‌ನ 222, ಬಿಎಸ್‌ಪಿಯ 175, ಎನ್‌ಸಿಪಿಯ 17, ಸಿಪಿಐ (ಎಂ)ನ 17 ಹಾಗೂ ಸಿಪಿಐನ 8 ಮಂದಿ ಕಣದಲ್ಲಿದ್ದಾರೆ. ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಒಟ್ಟು 832 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಯಮಕನಮರಡಿ ಮತ್ತು ಮುಧೋಳ ಕ್ಷೇತ್ರಗಳಲ್ಲಿ ಕೇವಲ 5 ಮಂದಿ ಕಣದಲ್ಲಿದ್ದಾರೆ. ಬಳ್ಳಾರಿ ನಗರದಲ್ಲಿ ಗರಿಷ್ಠ ಅಂದರೆ 29 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇವರಲ್ಲಿ 19 ಮಂದಿ ಪಕ್ಷೇತರರು. ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣಾದಲ್ಲಿ 27 ಮಂದಿ ಕಣದಲ್ಲಿದ್ದು, ಇವರಲ್ಲಿ 15 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಬಾಗಲಕೋಟೆ, ದೇವದುರ್ಗ, ಕುಂದಾಪುರ, ಬಂಟ್ವಾಳ, ಮೂಡಬಿದರೆ, ಪುತ್ತೂರು, ಎಚ್.ಡಿ.ಕೋಟೆ ಕ್ಷೇತ್ರಗಳಲ್ಲಿ ಆರು ಮಂದಿ ಕಣದಲ್ಲಿದ್ದಾರೆ.

33 ಕ್ಷೇತ್ರಗಳಲ್ಲಿ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2008ರ ಚುನಾವಣೆಯಲ್ಲಿ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಇದ್ದ ಕ್ಷೇತ್ರಗಳ ಸಂಖ್ಯೆ ಕೇವಲ 16. ಪಕ್ಷೇತರರು ಅಧಿಕ ಸಂಖ್ಯೆಯಲ್ಲಿ ಸ್ಪರ್ಧಿಸಿರುವುದರಿಂದ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಇರುವ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಹೆಚ್ಚುವರಿಯಾಗಿ 7,726 ಮತಯಂತ್ರಗಳ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.