ADVERTISEMENT

ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಸುವರ್ಣ ವಿಧಾನಸೌಧ (ಬೆಳಗಾವಿ): `ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ `ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ' ಎಂಬ ಮರು ನಾಮಕರಣ ಮಾಡುವ ಪ್ರಸ್ತಾವವನ್ನು ಕೇಂದ್ರಕ್ಕೆ ಕಳುಹಿಸಿಕೊಡಲು ವಿಧಾನಸಭೆ ಸರ್ವಾನುಮತದಿಂದ ತೀರ್ಮಾನಿಸಿತು.

ಪಿಕಾರ್ಡ್ ಸಾಲ ಮನ್ನಾಕ್ಕೆ ಚಿಂತನೆ: ರಾಜ್ಯದ ಪ್ರಾಥಮಿಕ ಸಹಕಾರ, ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ  (ಪಿಕಾರ್ಡ್) ಬ್ಯಾಂಕ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು ಬಾಕಿ ಉಳಿಸಿಕೊಂಡಿರುವ ರೂ 97.49 ಕೋಟಿ ಮೊತ್ತದ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡುವ ವಿಷಯವಾಗಿ ಸಮಾಜ ಕಲ್ಯಾಣ ಇಲಾಖೆ ಪರಿಶೀಲನೆ ನಡೆಸುತ್ತಿದೆ ಎಂದು ಕಾನೂನು ಸಚಿವ ಎಸ್. ಸುರೇಶಕುಮಾರ್ ತಿಳಿಸಿದರು.

ಆರು ಮಸೂದೆ ಮಂಡನೆ: ಸ್ಥಳೀಯ ಪ್ರಾಧಿಕಾರಗಳಲ್ಲಿ ಪಕ್ಷಾಂತರ ನಿಷೇಧಿಸುವ ಕಾಯ್ದೆಗೆ ತಿದ್ದುಪಡಿ ತರುವುದು, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಸ್ಥಾಪನೆ, ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚನೆ, ಲಿಫ್ಟ್‌ಗಳು ಮತ್ತು ಎಸ್ಕಲೇಟರ್‌ಗಳ ನಿರ್ವಹಣೆಯನ್ನು ಕಾನೂನು ವ್ಯಾಪ್ತಿಗೆ ತರುವುದು, ಸೌಹಾರ್ದ ಸಹಕಾರಿ ಕಾಯ್ದೆಗೆ ತಿದ್ದುಪಡಿ ತರುವುದು ಸೇರಿದಂತೆ ಆರು ಮಸೂದೆಗಳನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಸಹಕಾರ ಸಚಿವರು ಯಾರು?
ರಾಜ್ಯದ ಸಹಕಾರ ಸಚಿವರು ಯಾರು? ಬಿ.ಜೆ.ಪುಟ್ಟಸ್ವಾಮಿ ಅವರೇ ಈಗಲೂ ಸಹಕಾರ ಸಚಿವರಾ? ಹಾಗಿದ್ದರೆ ಅವರು ಎಲ್ಲಿದ್ದಾರೆ? ವಿಧಾನಸಭೆಯಲ್ಲಿ ಮಸೂದೆ ಮಂಡನೆ ಸಂದರ್ಭದಲ್ಲಿ ಸಿದ್ದರಾಮಯ್ಯಮ, ಟಿ.ಬಿ.ಜಯಚಂದ್ರ ಎತ್ತಿದ ಪ್ರಶ್ನೆ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದವು.

`ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ- 2012' ಮಸೂದೆ ಮಂಡನೆ ಪ್ರಸ್ತಾವ, ಹಿಂದೆ ಸಹಕಾರ  ಸಚಿವರಾಗಿದ್ದ ಪುಟ್ಟಸ್ವಾಮಿ ಹೆಸರಿನಲ್ಲಿತ್ತು. ಆದರೆ, ಸಚಿವ ಸುರೇಶಕುಮಾರ್ ಪ್ರಸ್ತಾವ ಮಂಡಿಸಲು ಮುಂದಾದರು.  ಜಯಚಂದ್ರ, `ನೀವು ಸಹಕಾರ ಸಚಿವರೇ' ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಯವರ ಬಳಿಯೇ ಈ ಖಾತೆ ಇದೆ.

ಅವರ ಸೂಚನೆಯಂತೆ ಮಸೂದೆ ಮಂಡಿಸುತ್ತಿದ್ದೇನೆ' ಎಂದು ಸುರೇಶಕುಮಾರ್ ಹೇಳಿದರು. `ಪುಟ್ಟಸ್ವಾಮಿ ಈಗ ಸಚಿವರಲ್ಲವೇ? ಅವರೇ ರಾಜೀನಾಮೆ ನೀಡಿದ್ದಾರಾ? ಅಥವಾ ವಜಾ ಮಾಡಲಾಗಿದೆಯೇ' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT