ADVERTISEMENT

ವೀಣಾ, ಬೊಳುವಾರುಗೆ ಬಸವರಾಜ ಕಟ್ಟೀಮನಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಬೆಳಗಾವಿ: ಹಿರಿಯ ಲೇಖಕ ದಿವಂಗತ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ನೀಡುವ ಪ್ರಸಕ್ತ ಸಾಲಿನ ಕಥಾ ಪ್ರಶಸ್ತಿಗೆ ಲೇಖಕರಾದ ಬೊಳುವಾರು ಮಹಮ್ಮದ್ ಕುಂಞ ಹಾಗೂ ಡಾ. ವೀಣಾ ಶಾಂತೇಶ್ವರ ಆಯ್ಕೆಯಾಗಿದ್ದಾರೆ.

`ಪ್ರಶಸ್ತಿಯು 50,000 ರೂಪಾಯಿ ನಗದು ಹಾಗೂ ಫಲಕ ಒಳಗೊಂಡಿದೆ. ಬಸವರಾಜ ಕಟ್ಟೀಮನಿ ಅವರ ಜನ್ಮದಿನವಾದ ಅಕ್ಟೋಬರ್ 5ರಂದು ಬೆಳಗಾವಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ' ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಂ.ಕಲಬುರ್ಗಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಬೊಳುವಾರು ಮಹಮ್ಮದ್ ಕುಂಞ ಅವರು ಸದ್ಯ ಬೆಂಗಳೂರಿನಲ್ಲಿ ಬ್ಯಾಂಕೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ವೀಣಾ ಶಾಂತೇಶ್ವರ ಅವರು ಧಾರವಾಡದವರು. ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವಂತೆ ವಿಮರ್ಶಕರಾದ ಡಾ. ಗಿರಡ್ಡಿ ಗೋವಿಂದರಾಜ ಹಾಗೂ ಸಿ.ಎನ್.ರಾಮಚಂದ್ರನ್ ಅವರಿಗೆ ಕೇಳಿಕೊಳ್ಳಲಾಗಿತ್ತು. ಇಬ್ಬರೂ ವಿಮರ್ಶಕರು ತಲಾ ಮೂವರ ಹೆಸರನ್ನು ಸೂಚಿಸಿದ್ದರು. ಇವರಿಬ್ಬರನ್ನು ಆಯ್ಕೆ ಮಾಡಲಾಯಿತು ಎಂದರು.

ಅ. 5ರಿಂದ 7ರ ವರೆಗೆ ಯುವ ಕಥಾ ಕಮ್ಮಟವನ್ನು ಬೆಳಗಾವಿಯಲ್ಲಿ ನಡೆಸಲಾಗುವುದು. 15 ಮಂದಿ ವಿದ್ವಾಂಸರು ಹಾಗೂ 50 ಮಂದಿ ಯುವ ಕಥೆಗಾರರು ಭಾಗವಹಿಸುವರು ಎಂದು ತಿಳಿಸಿದ ಡಾ. ಕಲಬುರ್ಗಿ, 45 ವರ್ಷದೊಳಗಿನ ಲೇಖಕರ 12 ಸಾಹಿತ್ಯ ಪ್ರಕಾರಗಳ ಪುಸ್ತಕಗಳಿಗೆ ತಲಾ 10,000 ರೂಪಾಯಿಗಳಂತೆ ಬಹುಮಾನ ನೀಡುವ ಬಗ್ಗೆ ಈಗಾಗಲೇ ಪ್ರಕಟಿಸಲಾಗಿತ್ತು. ಸದ್ಯ 30 ಪುಸ್ತಕಗಳು ಬಂದಿದ್ದು, ಸೆ. 30ರ ವರೆಗೆ ಪುಸ್ತಕಗಳನ್ನು ಕಳುಹಿಸಲು ಅವಧಿ ವಿಸ್ತರಿಸಲಾಗಿದೆ ಎಂದು ಹೇಳಿದರು.

ಪ್ರತಿಷ್ಠಾನ ಆರಂಭವಾಗಿ ಒಂದೂವರೆ ವರ್ಷದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ವಾರ್ಷಿಕ ಪ್ರಗತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬೆಳಗಾವಿಯ ಸುವರ್ಣ ಸಮುಚ್ಚಯದಲ್ಲಿ ಪ್ರತಿಷ್ಠಾನದ ಕಾರ್ಯಾಲಯ ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಿದೆ. ಇದಕ್ಕೆ ಅಗತ್ಯ ಸಿಬ್ಬಂದಿ ಸಹ ನಿಯೋಜಿಸಲಾಗುವುದು ಎಂದು ಡಾ. ಕಲಬುರ್ಗಿ ತಿಳಿಸಿದರು. ಪ್ರತಿಷ್ಠಾನದ ಸದಸ್ಯರಾದ ಪ್ರೊ. ಚಂದ್ರಶೇಖರ ಅಕ್ಕಿ, ಡಾ. ಬಸವರಾಜ ಸಾದರ, ಶಿರೀಷ್ ಜೋಶಿ, ಶಿವಕುಮಾರ ಕಟ್ಟೀಮನಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.