ADVERTISEMENT

ವೀರಶೈವ ಮಹಾಸಭೆಗೆ ಶಾಮನೂರು ಸಾರಥ್ಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷರಾಗಿ ಎನ್.ತಿಪ್ಪಣ್ಣ ಅಧಿಕಾರ ವಹಿಸಿಕೊಂಡರು.
ಸೋಮವಾರ ನಡೆದ ಸಮಾರಂಭದಲ್ಲಿ ಮಹಾಸಭಾದ ಆಡಳಿತಾಧಿಕಾರಿ ಜಿ.ಎಂ.ಧನಂಜಯ್ ಅವರು ಶಾಮನೂರು ಶಿವಶಂಕರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇತ್ತೀಚೆಗೆ ನಡೆದ ಮಹಾಸಭಾದ ಚುನಾವಣೆಯಲ್ಲಿ ಇವರಿಬ್ಬರೂ ಆಯ್ಕೆಯಾಗಿದ್ದರು.

ಸಮಾರಂಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ `ರಾಜಕೀಯ ಕ್ಷೇತ್ರದಲ್ಲಿ ವೀರಶೈವ ಸಮುದಾಯವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಹಲವು ತಂತ್ರಗಳನ್ನು ಮಾಡಿ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು.

ಇಂತಹ ಅನ್ಯಾಯಗಳ ವಿರುದ್ಧ ವೀರಶೈವ ಒಕ್ಕೂಟಗಳು ಹೋರಾಟ ಮಾಡಿದರೆ ಮಾತ್ರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ನಮ್ಮ ಸಮುದಾಯ ಅಭಿವೃದ್ಧಿ ಸಾಧಿಸಬಹುದು~ ಎಂದರು.
ಮಹಾಸಭಾದ ನೂತನ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ `ಒಂದು ವರ್ಷದ ಹಿಂದೆಯೇ ನಾನು ವೀರಶೈವ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಬೇಕಿತ್ತು.

ಹಲವು ಕಾರಣಗಳಿಂದ ಅದು ತಡವಾಗಿದೆ. ಮಹಾಸಭೆಗೂ ಯಾವುದೇ ಪಕ್ಷಕ್ಕೂ ಸಂಬಂಧವಿಲ್ಲ. ಎಲ್ಲಾ ಉಪಜಾತಿಗಳನ್ನು ಒಗ್ಗೂಡಿಸುವ ಜವಾಬ್ದಾರಿ ನನ್ನ ಮೇಲಿದೆ. ಆ ನಿಟ್ಟಿನಲ್ಲೇ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದ ಹಿತಕ್ಕಾಗಿ ಶ್ರಮಿಸುತ್ತೇನೆ~ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.