ADVERTISEMENT

’ವೆಚ್ಚ ಮಿತಿ ಕ್ಷೇತ್ರ’ ಪಟ್ಟಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST

ಮೈಸೂರು: ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ದೃಷ್ಟಿಯಿಂದ ಜಿಲ್ಲೆಯ ಕೆಲವು ವಿಧಾನಸಭಾ ಕ್ಷೇತ್ರಗಳನ್ನು ‘ವೆಚ್ಚ ಮಿತಿ ಕ್ಷೇತ್ರ’ಗಳೆಂದು ಘೋಷಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಪಟ್ಟಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಹಣ ಹಂಚುವುದು, ಉಡುಗೊರೆ ಕೊಡುವುದು, ಆಮಿಷ ಒಡ್ಡಿ ಮತ ಪಡೆಯುವುದಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಆಯೋಗವು ಒಪ್ಪಿದರೆ ಈಗಿರುವ ಮಿತಿಗಿಂತ ಕಡಿಮೆ ಖರ್ಚನ್ನು ಈ ಕ್ಷೇತ್ರಗಳಲ್ಲಿ ಮಾಡಬೇಕಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರವೊಂದಕ್ಕೆ ಪ್ರತಿ ಅಭ್ಯರ್ಥಿ ಗರಿಷ್ಠ ₹ 28 ಲಕ್ಷದವರೆಗೆ ಖರ್ಚು ಮಾಡಲು ಕೇಂದ್ರ ಚುನಾವಣಾ ಆಯೋಗವು ಮಿತಿ ನಿಗದಿಪಡಿಸಿದೆ. ಚುನಾವಣಾ ಅಕ್ರಮ ಹೆಚ್ಚಿರುವ ಕ್ಷೇತ್ರಗಳಲ್ಲಿ ಈ ಮಿತಿಯನ್ನು ಮತ್ತಷ್ಟು ಕಡಿತಗೊಳಿಸಲು ನಿರ್ಧರಿಸಲಾಗುತ್ತದೆ. ಅಂದರೆ ವೆಚ್ಚದ ಮಿತಿ ₹ 15–20 ಲಕ್ಷಕ್ಕೂ ಇಳಿಯಬಹುದು ಎಂದು ಅವರು ವಿವರಿಸಿದರು.

ADVERTISEMENT

‘ವೆಚ್ಚ ಮಿತಿ ಕ್ಷೇತ್ರ’ಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದ ತಪಾಸಣಾ ತಂಡಗಳು ಅಕ್ರಮ ಪತ್ತೆಗೆ ಬೀಡುಬಿಟ್ಟಿರುತ್ತವೆ. ಗೋಪ್ಯತೆ ದೃಷ್ಟಿಯಿಂದ ಈಗಲೇ ಜಿಲ್ಲೆಯ ಇಂತಹ ಕ್ಷೇತ್ರಗಳ ವಿವರ ನೀಡಲಾಗದು. ಇದೇ ಮೊದಲ ಬಾರಿಗೆ ಇಂತಹ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.