ಬಳ್ಳಾರಿ: ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಡೆಸಿದ್ದ ಸ್ನಾತಕೋತ್ತರ (ಪಿಜಿ) ಪ್ರವೇಶ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿ, ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ)ಯ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಡಾ.ವಿನಾಯಕ ಪ್ರಸನ್ನ ಅವರ ಬಂಧನಕ್ಕೆ ವಾರೆಂಟ್ ಹೊರಡಿಸಲಾಗಿದೆ.
ವಿಮ್ಸ ಪರೀಕ್ಷಾ ಕೇಂದ್ರದಲ್ಲಿ ಕಳೆದ ಜ. 31ರಂದು ನಡೆದಿದ್ದ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಏಳು ಜನ ಅಭ್ಯರ್ಥಿಗಳು ಅಗ್ರ ರ‌್ಯಾಂಕ್ ಗಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಪ್ರಮುಖ ಆರೋಪಿಯ ಬಂಧನಕ್ಕೆ ಈ ವಾರೆಂಟ್ ಜಾರಿ ಮಾಡಿದ್ದಾರೆ.
ಆರೋಪಿ ಡಾ. ವಿನಾಯಕ ಪ್ರಸನ್ನ ಅವರಿಗಾಗಿ ನಗರದಲ್ಲಿ ಸೋಮವಾರ ಸ್ಥಳೀಯ ಪೊಲೀಸರ ನೆರವಿನೊಂದಿಗೆ ತೀವ್ರ ಶೋಧ ಕಾರ್ಯ ನಡೆಸಲಾಗಿದೆ. ಆದರೆ, ಕಳೆದ ಐದು ದಿನಗಳಿಂದ ಅವರು ಪರಾರಿಯಾಗಿದ್ದಾಗಿ ತಿಳಿದುಬಂದಿದೆ.
ಪ್ರವೇಶ ಪರೀಕ್ಷೆಯಲ್ಲಿ ಅಕ್ರಮಗಳು ಸಂಭವಿಸಿರುವ ಕುರಿತು ಕೆಲವು ಅಭ್ಯರ್ಥಿಗಳು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರಲ್ಲದೆ, ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿತ್ತು.ಬಳ್ಳಾರಿಯ ವಿಮ್ಸನಲ್ಲಿ ಕೆಲಸ ಮಾಡುತ್ತಿರುವ ಕೆಲವು ವೈದ್ಯರು ಹಾಗೂ ಆಪ್ತರು ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಬರೆದಿದ್ದರಲ್ಲದೆ, ಅಗ್ರ ರ‌್ಯಾಂಕ್‌ಗಳನ್ನೂ ಗಳಿಸಿದ್ದರು.
ನಿರ್ದಿಷ್ಟವಾದ ಒಂದು ಪರೀಕ್ಷಾ ಕೊಠಡಿಯೊಂದರ ಅಭ್ಯರ್ಥಿಗಳೇ ಅಗ್ರ ರ‌್ಯಾಂಕ್‌ಗೆ ಭಾಜನರಾಗಿದ್ದರು.
ರಾಜೀವಗಾಂಧಿ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಹೇಮಂತರಾಜ್ ಎಂಬುವವರನ್ನು ಈಗಾಗಲೇ ಬಂಧಿಸಿರುವ ಪೊಲೀಸರು, ಇದೀಗ ಬಳ್ಳಾರಿಗೆ ಆಗಮಿಸಿದ್ದು. ಡಾ.ವಿನಾಯಕ ಪ್ರಸನ್ನ ಅವರ ಬಂಧನಕ್ಕೆ ಜಾಲ ಬೀಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು, ವಿಮ್ಸನ ನಾಲ್ವರು ಸಿಬ್ಬಂದಿಗೆ ನೋಟಿಸ್ ನೀಡಿ ಇದೇ 23ರಂದು ಬೆಂಗಳೂರಿಗೆ ಬರಲು ಸೂಚಿಸಿದ್ದರು.ಆದರೆ, ಡಾ.ವಿನಾಯಕ ಪ್ರಸನ್ನ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರಿಗೆ ರಜೆ ನೀಡದಂತೆಯೂ ವಿಮ್ಸ ಪ್ರಾಚಾರ್ಯ ಡಾ.ಶ್ರೀನಿವಾಸಮೂರ್ತಿ ಅವರಿಗೆ ಸೂಚಿಸಲಾಗಿತ್ತು. ಆರೋಪಿಯು ರಜೆ ಪಡೆಯದೆ ಐದು ದಿನಗಳಿಂದ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.