ADVERTISEMENT

ವೈದ್ಯರಿಲ್ಲದೆ ಬೀದಿಗೆ ಬಿದ್ದ ಗರ್ಭಿಣಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 20:06 IST
Last Updated 12 ಏಪ್ರಿಲ್ 2013, 20:06 IST
ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಹಾದಿಯಲ್ಲಿ ಮಲಗಿ ಪರಿತಪಿಸುತ್ತಿರುವ ಗರ್ಭಿಣಿ
ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಹಾದಿಯಲ್ಲಿ ಮಲಗಿ ಪರಿತಪಿಸುತ್ತಿರುವ ಗರ್ಭಿಣಿ   

ಪಾವಗಡ:  ಹೆರಿಗೆ ನೋವಿನಿಂದ ಬಳಲುತ್ತಿದ್ದ ತಾಲ್ಲೂಕಿನ ಪೋಲೇನಹಳ್ಳಿಯ ಗರ್ಭಿಣಿಯು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಬೀದಿಗೆ ಬಿದ್ದ ಘಟನೆ ನಡೆದಿದೆ. ಎಲ್ಲ ವೈದ್ಯರು ಯುಗಾದಿ ಹಬ್ಬಕ್ಕೆ ರಜೆ ಹಾಕಿ ತಮ್ಮ ಊರುಗಳಿಗೆ ತೆರಳಿದ್ದರು.

ಗರ್ಭಿಣಿಯನ್ನು ತುರ್ತು ಚಿಕಿತ್ಸೆಗಾಗಿ ಬುಧವಾರ ರಾತ್ರಿ ಕರೆತರಲಾಗಿತ್ತು.  ಆದರೆ ಚಿಕಿತ್ಸೆ ನೀಡಲು ಒಬ್ಬ ಸಿಬ್ಬಂದಿಯೂ ಇರಲಿಲ್ಲ. ಹೀಗಾಗಿ ಆಕೆಯನ್ನು ಶನಿಮಹಾತ್ಮ ವೃತ್ತದ ಬಳಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಗರ್ಭಿಣಿಯ ಸಂಬಂಧಿಕರ ಬಳಿ ಹಣ ಇಲ್ಲದ ಕಾರಣ ಖಾಸಗಿ ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಯ ಒಳಗೂ ಸೇರಿಸಲಿಲ್ಲ. ಇದರಿಂದಾಗಿ ಆಕೆ ಹಲವು ಗಂಟೆಗಳ ಕಾಲ ಸಾರ್ವಜನಿಕರು ಓಡಾಡುವ ರಸ್ತೆಯಲ್ಲೇ ಅಸಹಾಯಕರಾಗಿ ಮಲಗಿ ನೋವು ಅನುಭವಿಸಬೇಕಾಯಿತು. ನಂತರ ಸಾರ್ವಜನಿಕರು ಒಗ್ಗೂಡಿ ಆಕೆಯ ಸಂಬಂಧಿಕರಿಗೆ ನೆರವು ನೀಡಿ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದರು.

ಅಸಹಾಯಕತೆ: ಘಟನೆ ಕುರಿತು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಹೇಶ್ ಅವರನ್ನು ಪ್ರಶ್ನಿಸಿದರೆ, `ನಾನೇನು ಮಾಡಲಿ' ಎಂಬ ಅಸಹಾಯಕತೆ ವ್ಯಕ್ತಪಡಿಸಿದರು. `ಎಲ್ಲರೂ ರಜೆ ಹಾಕಿ ಹೋಗಿದ್ದಾರೆ, ಇದು ಕೇವಲ ನಮ್ಮ ಆಸ್ಪತ್ರೆ ಸಮಸ್ಯೆಯಲ್ಲ. ಇಡೀ ರಾಜ್ಯದಲ್ಲಿ ಇಂಥದ್ದೇ ವಾತಾವರಣವಿದೆ' ಎಂದು ಹೇಳಿದರು.

ವೈದ್ಯರ ಮಧ್ಯೆ ಡೀಲ್: `ಪಟ್ಟಣದ ಖಾಸಗಿ ಆಸ್ಪತ್ರೆಗಳಲ್ಲಿ ಜನರನ್ನು ಜಿಗಣೆಗಳಂತೆ ಸುಲಿಯಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಸಹಜ ಹೆರಿಗೆಯಾಗುವ ಅವಕಾಶಗಳಿದ್ದರೂ ಉಮ್ಮು ನೀರು ಖಾಲಿಯಾಗಿದೆ, ಮಗು ಅಡ್ಡ ತಿರುಗಿದೆ, ಮಗುವಿಗೆ ಕರುಳು ಸುತ್ತಿಕೊಂಡಿದೆ. ಇನ್ನೊಂದು ಗಂಟೆಯೊಳಗೆ ಸಿಸೇರಿಯನ್ ಮಾಡಿ ಮಗುವನ್ನು ಹೊರ ತೆಗೆಯದಿದ್ದರೆ ತಾಯಿ, ಮಗು ಇಬ್ಬರ ಜೀವಕ್ಕೂ ಅಪಾಯ' ಎಂದು ಹೆದರಿಸಿ ಬಡವರಿಂದ ಹಣ ಸುಲಿಯಲಾಗುತ್ತಿದೆ ಎಂದು ಆಸ್ಪತ್ರೆಗೆ ಮಗಳನ್ನು ಸೇರಿಸಿದ್ದ ವೈ.ಎನ್.ಹೊಸಕೋಟೆ ವ್ಯಕ್ತಿಯೊಬ್ಬರು ಕಣ್ಣೀರಿಟ್ಟರು.

`ಗೌರ್ಮೆಂಟ್ ಡಾಕ್ಟ್ರುಗೂ- ಪ್ರೈವೇಟ್ ಡಾಕ್ಟ್ರುಗೂ ಡೀಲ್ ಆಗೈತೆ. ಅದ್ಕೇ ಇವ್ರ ಯಾವಾಗ್ಲೂ ರಜಾ ಹಾಕ್ತಾರೆ. ಪ್ರೈವೇಟ್‌ನವ್ರ ದುಡ್ಡಿಲ್ಲ ಅಂದ್ರೆ ಹತ್ರಕ್ಕೂ ಬಿಟ್ಕಳಲ್ಲ. ಬಡವ್ರ ಪಾಡು ಯಾರಿಗೂ ಬೇಡ' ಎಂದು ಅವರು ಉಮ್ಮಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.