ADVERTISEMENT

ಶಬರಿಮಲೆ ದುರಂತ: ಬಾರದ ಪರಿಹಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 16:50 IST
Last Updated 16 ಫೆಬ್ರುವರಿ 2011, 16:50 IST

ಬೆಳಗಾವಿ: ದೇಶವನ್ನೇ ತಲ್ಲಣಗೊಳಿಸಿದ್ದ ಶಬರಿಮಲೆ ಕಾಲ್ತುಳಿತ ದುರಂತ ಸಂಭವಿಸಿ ತಿಂಗಳು ಕಳೆದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸಿದ್ದ ಪರಿಹಾರ ಮಾತ್ರ ಕುಟುಂಬದವರನ್ನು ತಲುಪಿಲ್ಲ. ಹೀಗಾಗಿ ದುಡಿಯುವ ಕೈಗಳನ್ನು ಕಳೆದುಕೊಂಡಿರುವ ಕುಟುಂಬಗಳು ನಿತ್ಯದ ಊಟಕ್ಕಾಗಿ ಪರದಾಡುತ್ತಿವೆ.

ಶಬರಿಮಲೆ ದುರಂತದಲ್ಲಿ ಸತ್ತವರ ಪೈಕಿ ಬಹುತೇಕರ ಯುವಕರಾಗಿದ್ದರು. ಸಣ್ಣ ವ್ಯಾಪಾರ ಇಲ್ಲವೇ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳ ಆಹಾರದ ಮೂಲವಾಗಿದ್ದರು. ದುಡಿಯುವವರೇ ಹೋಗಿದ್ದರಿಂದ ಆ ಕುಟುಂಬಗಳು ಬೀದಿ ಪಾಲಾಗಬೇಕಾದ ಸ್ಥಿತಿ ಎದುರಿಸುತ್ತಿವೆ.

ದುರಂತ ನಡೆದ ಕೆಲವೇ ಗಂಟೆಗಳಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಲಾ ಒಂದು ಲಕ್ಷ ರೂ ಪರಿಹಾರ ಘೋಷಿಸಿದ್ದವು. ಕೇರಳ ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಆದರೆ ಇಂದಿಗೂ ಆ ಕುಟುಂಬಗಳಿಗೆ ಒಂದು ಪೈಸೆಯೂ ದೊರೆತಿಲ್ಲ.

ಈ ದುರಂತದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 10 ಜನರು ಸಾವಿಗೆ ಈಡಾಗಿದ್ದರು. ಗೋಕಾಕ ತಾಲ್ಲೂಕಿನ ಪುರುಷೋತ್ತಮ ಪೂಜಾರಿ, ಬಸವರಾಜ ಮಿರ್ಜಿ, ಸಿದ್ಧರಾಮ ಮುರ್ಕಿಗಾಂವಿ, ಪ್ರಮೋದ ಶಿವಪುತ್ರಪ್ಪ, ಚಂದ್ರಶೇಖರ ಗುಂಡಕಲ್ಲಿ, ಪ್ರಕಾಶ ಪೂಜೇರಿ, ಚಂದ್ರಕಾಂತ ಭೋಸಲೆ ಹಾಗೂ ಬೆಳಗಾವಿ ನಗರದ ಆನಂದ ಗೊಲ್ಲರ, ಯಲ್ಲಪ್ಪ ಗೊಲ್ಲರ ಹಾಗೂ ನಾಗೇಶ ಇಟಗಿ ಎಂಬುವವರು ಸಾವನ್ನಪ್ಪಿದ್ದರು.

ದುರಂತದ ನಂತರ ಈ ಕುಟುಂಬಗಳಿಗೆ ನೆರವಿನ ಭರವಸೆಯ ಮಹಾಪುರವೇ ಹರಿದು ಬಂದಿತ್ತು. ಲಕ್ಷಾಂತರ ರೂಪಾಯಿ ನೆರವಿನ ಭರವಸೆಯ ಮಾತುಗಳು ಕೇಳಿ ಬರುತ್ತಿದ್ದಂತೆ ಸಂಬಂಧಿಕರು ಸಹಾಯ ಹಸ್ತ ಚಾಚಿದ್ದರು. ಆದರೆ ತಿಂಗಳ ನಂತರವೂ ಪರಿಹಾರ ಬಾರದ್ದರಿಂದ ಅವರಲ್ಲಿಯೂ ಕೆಲವರು ದೂರ ಸರಿದಿದ್ದಾರೆ.
ಸರ್ಕಾರದ ಉನ್ನತ ಅಧಿಕಾರಿಗಳು ಘಟನೆ ನಂತರ ಮೃತರ ಕುಟುಂಬದ ಬ್ಯಾಂಕ್ ಅಕೌಂಟ್ ಸಂಖ್ಯೆ, ಕುಟುಂಬ ಸದಸ್ಯರ ಸಂಖ್ಯೆ ಹಾಗೂ ವಿವಿಧ ದಾಖಲಾತಿಗಳನ್ನು ಕಳುಹಿಸುವಂತೆ ಸೂಚಿಸಿದ್ದರು. ಘಟನೆ ನಡೆದ ಒಂದು ವಾರದಲ್ಲಿಯೇ ಎಲ್ಲವನ್ನೂ ಕಳುಹಿಸಲಾಗಿದೆ. ಪರಿಹಾರಕ್ಕಾಗಿ ಎದುರು ನೋಡ್ತುದ್ದೇವೆ ಎನ್ನುತ್ತಾರೆ ಬೆಳಗಾವಿಯ ತಹಶೀಲ್ದಾರ ಎ.ಎಸ್. ಆಲೂರ.

ಕುಟುಂಬದ ಹಿರಿಯ (ಗಂಡ)ನ ಸಾವು ಬರಸಿಡಿಲಿನಂತೆ ಬಂದೆರಗಿತ್ತು. ಆಗ ಮನೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಪರಿಹಾರದ ಭರವಸೆಗಳನ್ನು ನೀಡಿದ್ದರು. ಆದರೆ ಇಲ್ಲಿವರೆಗೆ ಯಾವುದೇ ಹಣ ಬಂದಿಲ್ಲ ಎನ್ನುತ್ತಾರೆ ಯಲ್ಲಪ್ಪ ಗೊಲ್ಲರ ಎಂಬುವವರ ಪತ್ನಿ ಗಂಗವ್ವ ಗೊಲ್ಲರ.

’ಮನೆಯವರು ಕೂದಲು ಹಾಗೂ ಚಿಂದಿಗಳನ್ನು ಆರಿಸುವ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರಿಲ್ಲ. ಅವರ ಕೆಲಸವನ್ನು ನಾನೇ ಮುಂದುವರೆಸಿದ್ದೇನೆ. ಮಗಳನ್ನು ಇಲ್ಲಿಯೇ ಪಕ್ಕದ ಮನೆಗಳಲ್ಲಿ ಬಿಟ್ಟು ಹೋಗುತ್ತೇನೆ. ಸಣ್ಣ ಮಗುವನ್ನು ಮಾತ್ರ ನನ್ನ ಜತೆಗೆ ಕರೆದುಕೊಂಡು ಹೋಗುತ್ತಿದ್ದೇನೆ. ದುಡಿಯದಿದ್ದರೆ ಜೀವನ ಸಾಗಬೇಕಲ್ಲ ಎನ್ನುತ್ತಾರೆ ಅವರು.

ಆನಂದ ಗೊಲ್ಲರ ಅವರ ಮನೆ ದುಸ್ಥಿತಿಯಲ್ಲಿದೆ. ದುಡಿಯುವ ಒಬ್ಬ ಮಗ ಸಾವನ್ನಪ್ಪಿದ್ದಾನೆ. ಪರಿಹಾರ ಬಂದರೆ ದುರಸ್ತಿ ಮಾಡಿಸಿಕೊಳ್ಳುವ ಯೋಚನೆ ಇದೆ. ಆದರೆ ಪರಿಹಾರ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.