ADVERTISEMENT

ಶಾರದಾಂಬೆಯ ಅದ್ದೂರಿ ಮಹಾರಥೋತ್ಸವ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:21 IST
Last Updated 1 ಅಕ್ಟೋಬರ್ 2017, 19:21 IST
ಶಾರದಾಂಬೆಯ ಅದ್ದೂರಿ ಮಹಾರಥೋತ್ಸವ
ಶಾರದಾಂಬೆಯ ಅದ್ದೂರಿ ಮಹಾರಥೋತ್ಸವ   

ಶೃಂಗೇರಿ: ನವರಾತ್ರಿ ಪ್ರಯುಕ್ತ ಶೃಂಗೇರಿ ಶಾರದಾಂಬಾ ಮಹಾರಥೋತ್ಸವ ಮತ್ತು ಶಾರದಾ ಮಠದ ಕಿರಿಯ ಯತಿ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಪಟ್ಟಣದ ರಾಜಬೀದಿಯಲ್ಲಿ ಭಕ್ತಸಾಗರದ ನಡುವೆ ಭಾನುವಾರ ನಡೆಯಿತು.

ಹಿರಿಯ ಯತಿ ಭಾರತೀತೀರ್ಥ ಸ್ವಾಮೀಜಿ ಬೆಳಿಗ್ಗೆ ಆಹ್ನಿಕ ಕಾರ್ಯಕ್ರಮ ಮುಗಿಸಿ, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಕಿರಿಯ ಯತಿ ವಿಧುಶೇಖರ ಭಾರತೀ ಸ್ವಾಮೀಜಿ ಗುರುನಿವಾಸದಲ್ಲಿ ಚಂದ್ರಮೌಳೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಬಳಿಕ ತುಂಗಾ ನದಿಯನ್ನು ದೋಣಿಯಲ್ಲಿ ದಾಟಿ ಗಂಗಾ ಪೂಜೆ ನೆರವೇರಿಸಿದರು. ನಂತರ ಶಾರದಾ ಮಠದ ಹೊರ ಪ್ರಾಕಾರದ ಎಲ್ಲ ದೇವಾಲಯಗಳಿಗೂ ಅಧಿಷ್ಠಾನ ಮಂದಿರಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬೆಳಿಗ್ಗೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ರಾಜಬೀದಿಯಲ್ಲಿ ಉತ್ಸವ ನಡೆಸಲಾಯಿತು. ಸಾವಿರಾರು ಭಕ್ತರು ಜಯಘೋಷಗಳೊಂದಿಗೆ ರಥ ಎಳೆದರು. ರಥದ ಮುಂದೆ ಪುಷ್ಪಾಲಂಕೃತ ಚಿನ್ನದ ಅಡ್ಡ ಪಲ್ಲಕ್ಕಿಯಲ್ಲಿ ವಿಧುಶೇಖರ ಭಾರತೀ ಸ್ವಾಮೀಜಿ ಆಸೀನರಾದರು. ಜಯಘೋಷ ವಿಪ್ರತ್ತೋಮರ ವೇದಘೋಷಗಳು, ಮಂತ್ರ ಪಠಣದೊಂದಿಗೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.

ADVERTISEMENT

ರಾಜ ದರ್ಬಾರ್ ನಡೆಯಿತು. ಕಿರಿಯ ಸ್ವಾಮೀಜಿ ರಾಜ ಪೋಷಾಕು ಧರಿಸಿ, ಸ್ವರ್ಣ ಖಚಿತ ಸಿಂಹಾಸನದಲ್ಲಿ ಆಸೀನರಾಗಿ, ಭಕ್ತರನ್ನು ಆಶೀರ್ವದಿಸಿದರು. ಚತುರ್ವೇದ ಪಾರಾಯಣ, ವಾಲ್ಮೀಕಿ ರಾಮಾಯಣ, ದೇವಿ ಭಾಗವತ, ಶಂಕರ ದಿಗ್ವಿಜಯ ಪಾರಾಯಣಗಳು ನಡೆದವು. ಇದಕ್ಕೂ ಮೊದಲು ಚಿನ್ನದ ರಥದಲ್ಲಿ ಶಾರದೆಯನ್ನು ಪ್ರತಿಷ್ಠಾಪಿಸಿ, ಒಳ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.