ADVERTISEMENT

ಶಾಲೆ ಬಿಟ್ಟ ಬಳಿಕ ಸಾಮೂಹಿಕ ಓದು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಗದಗ: ಮಕ್ಕಳಲ್ಲಿ ಓದುವ ಪ್ರೌಢಿಮೆ ಬೆಳೆಸುವುದಕ್ಕಾಗಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯು ವಾರಾಂತ್ಯದಲ್ಲಿ `ಶಾಲೆ ಬಿಟ್ಟ ಬಳಿಕ ಸಾಮೂಹಿಕ ಓದು~ ಯೋಜನೆಯನ್ನು ಜಾರಿಗೆ ತಂದಿದೆ.ಪ್ರತಿ ಶನಿವಾರ ಮಧ್ಯಾಹ್ನ 11.30ರಿಂದ 12.15ರ ವರೆಗೆ ಪ್ರೌಢಶಾಲಾ ಮಕ್ಕಳು ಸಾಮೂಹಿಕವಾಗಿ ಶಾಲಾ ಗ್ರಂಥಾಲಯದಲ್ಲಿ ಇರುವ ಪುಸ್ತಕಗಳನ್ನು ತೆಗೆದುಕೊಂಡು ಓದುತ್ತಿದ್ದಾರೆ.

ಈ ಯೋಜನೆಯನ್ನು ಪ್ರಥಮವಾಗಿ ಮುಂಡರಗಿ ತಾಲ್ಲೂಕಿನ ಡಂಬಳ, ಹಳ್ಳಿಕೇರಿ, ಡೋಣಿ, ಬಿದರಳ್ಳಿ. ಹೆಸರೂರು ಪ್ರೌಢಶಾಲೆಯಲ್ಲಿ ಪ್ರಾರಂಭಿಸಲಾಗಿದೆ.ವಿದ್ಯಾರ್ಥಿಗಳು ಶಾಲಾ ಗ್ರಂಥಾಲಯದಲ್ಲಿ ಇರುವ ರಾಷ್ಟ್ರನಾಯಕರ ಜೀವನ ಚರಿತ್ರೆ, ಸ್ವಾತಂತ್ರ್ಯ ಸಂಗ್ರಾಮದ ಕಥಾವಳಿ, ಇತಿಹಾಸದ ನಾಯಕರು, ನೆಲ-ಜಲ ವಿಚಾರ, ಸಂಸ್ಕೃತಿ, ವಿಜ್ಞಾನ, ಮನೋರಂಜನೆ ಹಾಗೂ ಕಥಾ ಪುಸ್ತಕಗಳಲ್ಲಿ ತಮಗೆ ಇಷ್ಟ ಬಂದದ್ದನ್ನು ಆಯ್ಕೆ ಮಾಡಿಕೊಂಡು ಓದಬಹುದಾಗಿದೆ. ನಂತರ ಸೋಮವಾರ ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಬಂದ ಬಳಿಕ ಶನಿವಾರ ಓದಿದ್ದನ್ನು ಸುಮಾರು ಒಂದು ಪುಟದಷ್ಟಾದರೂ ಬರೆದುಕೊಡಬೇಕಾಗಿದೆ.

ಈ ಯೋಜನೆ ಮುಂಡರಗಿ ತಾಲ್ಲೂಕು ಬಿಇಓ ಎಂ.ಎ.ರಡ್ಡೇರ ಅವರ ಕನಸಿನ ಕೂಸು. ಸರ್ವಶಿಕ್ಷಣ ಅಭಿಯಾನ ಯೋಜನೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿರುವ ರಡ್ಡೇರ, ಶಾಲೆಯಲ್ಲಿ ಇರುವ ಗ್ರಂಥಾಲಯವನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಕೆಲವು ಶಾಲೆಗಳಲ್ಲಿ ಅನುಷ್ಠಾನಗೊಳಿಸಿದ್ದಾರೆ.

ಮುಂಡರಗಿ ತಾಲ್ಲೂಕಿನಲ್ಲಿ 23 ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳು ಇವೆ. ಎಲ್ಲ ಶಾಲೆಯಲ್ಲೂ ಗ್ರಂಥಾಲಯ ಇದೆ. ಅಲ್ಲದೆ ಶನಿವಾರ ಬಿಸಿಯೂಟವಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಇಲ್ಲದೆ ಮುಕ್ಕಾಲು ತಾಸು ಓದುವಂತಹ ವಾತಾವರಣ ಇರುತ್ತದೆ.  ಮುಂದಿನ ವಾರದಿಂದ ಈ ಎಲ್ಲ ಶಾಲೆಗಳಲ್ಲೂ ಈ ಯೋಜನೆ ಪ್ರಾರಂಭವಾಗುತ್ತದೆ.

ಅನುದಾನರಹಿತ ಶಾಲೆಗಳಿಗೆ ಈ ಯೋಜನೆಯನ್ನು ವಿಸ್ತರಿಸಲು ಆಗುವುದಿಲ್ಲ. ಏಕೆಂದರೆ ಅಲ್ಲಿ ಬಿಸಿಯೂಟದ ಸೌಲಭ್ಯ ಇಲ್ಲ ಎಂದು ರಡ್ಡೇರ ಅವರು  `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.