ADVERTISEMENT

ಶಾಸಕರ ಭವನದ ವಾಸ್ತವ್ಯ ತೆರವಿಗೆ ಹೊರಟ್ಟಿಗೆ ನೋಟಿಸ್!

ರಾಣೆಬೆನ್ನೂರು ಕ್ಷೇತ್ರದಲ್ಲಿ ಕೋಳಿವಾಡ– ಸಾವಕಾರ ದಾಯಾದಿ ಕಲಹ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST

ಬೆಂಗಳೂರು: ವಿಧಾನಸಭೆ ಸಚಿವಾಲಯ ವ್ಯಾಪ್ತಿಗೆ ಸೇರಿದ ಶಾಸಕರ ಭವನದಲ್ಲಿ ಹೊಂದಿರುವ ಕೊಠಡಿಯನ್ನು ತಕ್ಷಣ ತೆರವುಗೊಳಿಸುವಂತೆ ವಿಧಾನ ಪರಿಷತ್‌ ಹಿರಿಯ ಸದಸ್ಯ, ಜೆಡಿಎಸ್‌ನ ಬಸವರಾಜ ಹೊರಟ್ಟಿಗೆ ನೋಟಿಸ್ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

37 ವರ್ಷಗಳಿಂದ ವಿಧಾನ ಪರಿಷತ್‌ ಸದಸ್ಯರಾಗಿರುವ ಹೊರಟ್ಟಿ, ಮೊದಲ ಬಾರಿಗೆ ಆಯ್ಕೆಯಾದ ಬಳಿಕ (1981ರಲ್ಲಿ) ಶಾಸಕರ ಭವನದ ಕಟ್ಟಡ–2ರಲ್ಲಿ 435 ಮತ್ತು 436 ಕೊಠಡಿಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ, ಇದೀಗ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ನಿರ್ದೇಶನದಂತೆ, ಕೊಠಡಿ ಖಾಲಿ ಮಾಡಲು ಶಾಸಕರ ಭವನದ ಕ್ಷೇತ್ರಾಧಿಕಾರಿ ಶನಿವಾರ (ಮಾ. 31) ಹೊರಟ್ಟಿಗೆ ನೋಟಿಸ್‌ ನೀಡಿದ್ದಾರೆ.

ಶಾಸಕರ ಭವನದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್‌ ಎರಡೂ ಸಚಿವಾಲಯಗಳ ವ್ಯಾಪ್ತಿಗೆ ಸೇರಿದ ಕಟ್ಟಡಗಳಿವೆ. ಆದರೆ, ಎರಡೂ ಸದನಗಳ ಸದಸ್ಯರಿಗೆ ಯಾವುದೇ ತಾರತಮ್ಯ ಇಲ್ಲದೆ ಈ ಹಿಂದೆ ಎರಡೂ ಕಡೆ ಕೊಠಡಿಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. ಹೀಗಾಗಿ ಹೊರಟ್ಟಿ, ವಿಧಾನ ಸಭೆ ಸಚಿವಾಲಯದ ವ್ಯಾಪ್ತಿಯಲ್ಲಿರುವ ಕಟ್ಟಡದಲ್ಲಿ ಕೊಠಡಿ ಪಡೆದುಕೊಂಡಿದ್ದರು.

ADVERTISEMENT

ರಾಣೆಬೆನ್ನೂರು ಕ್ಷೇತ್ರವನ್ನು ಕೋಳಿವಾಡ ಅವರು, ಪುತ್ರ ಪ್ರಕಾಶ ಕೋಳಿವಾಡಗೆ ಕ್ಷೇತ್ರ ಬಿಟ್ಟುಕೊಡಲು ತೀರ್ಮಾನಿಸಿದ್ದಾರೆ. ಈ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಶ್ರೀಪಾದ ಸಾವಕಾರ ಸ್ಪರ್ಧೆಗೆ ಇಳಿದಿದ್ದಾರೆ.ಸಾಹುಕಾರ ಮತ್ತು ಕೋಳಿವಾಡ ದಾಯಾದಿಗಳು. ಆದರೆ, 20 ವರ್ಷಗಳಿಂದ ಅವರ ಮಧ್ಯದ ಸಂಬಂಧ ಹಳಸಿದೆ.

‘ರಾಜಕೀಯ ಕಾರಣಕ್ಕಾಗಿ ಕೊಠಡಿ ತೆರವುಗೊಳಿಸುವ ನೋಟಿಸ್ ನೀಡಿದ್ದಾರೆ. ಕ್ಷೇತ್ರದ ಮೇಲಿನ ಕೋಳಿವಾಡ ವ್ಯಾಮೋಹವೇ ಈ ಬೆಳವಣಿಗೆಗೆ ಕಾರಣ’ ಎಂದು ಹೊರಟ್ಟಿ  ಪ್ರತಿಕ್ರಿಯಿಸಿದ್ದಾರೆ.

‘ರಾಣೆಬೆನ್ನೂರು ಕ್ಷೇತ್ರಕ್ಕೆ ಸಾವಕಾರ ಟಿಕೆಟ್‌ ಪಡೆದಿದ್ದಾರೆ. ಸಾವಕಾರ ಅವರನ್ನು ಬದಲಿಸುವಂತೆ ಕುಮಾರಸ್ವಾಮಿ ಮೇಲೆ ಒತ್ತಡ ಹೇರಲು ಕೋಳಿವಾಡ ಕೋರಿದ್ದರು. ಆದರೆ, ಅದೇ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಸಾವಕಾರ ಪಟ್ಟು ಹಿಡಿದಿದ್ದಾರೆ’ ಎಂದೂ ಹೊರಟ್ಟಿ ಹೇಳಿದರು.

‘ಸ್ಪರ್ಧೆಯಿಂದ ಸಾವಕಾರ ಹಿಂದೆ ಸರಿಯದಿರಲು ನಾನು ಕಾರಣ ಎಂದುಕೊಂಡಿರುವ ಕೋಳಿವಾಡ ಕೊಠಡಿ ತೆರವು ಮಾಡಿಸಲು ಮುಂದಾಗಿದ್ದಾರೆ. ಸಭಾಧ್ಯಕ್ಷ ತನ್ನ ಘನತೆ ಬಿಟ್ಟು ಇಂತಹ ಕೆಲಸ ಮಾಡಿದ್ದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಳಿವಾಡ ಸಮರ್ಥನೆ: ‘ವಿಧಾನಪರಿಷತ್‌ ಸದಸ್ಯರಿಗೆ ಪ್ರತ್ಯೇಕ ಶಾಸಕರ ಭವನ ಇದೆ. ಅಲ್ಲಿ ವಾಸ್ತವ್ಯದ ಕೊಠಡಿ ಪಡೆಯಲು ಅವರು ಅರ್ಹರು. ಹೊರಟ್ಟಿ ಮಾತ್ರ ವಿಧಾನಸಭೆ ಸಚಿವಾಲಯಕ್ಕೆ ಸೇರಿದ ಶಾಸಕರ ಭವನದಲ್ಲಿ ಕೊಠಡಿ ಹೊಂದಿದ್ದಾರೆ. ಹೀಗಾಗಿ, ಅದನ್ನು ತೆರವುಗೊಳಿಸುವಂತೆ ನಿರ್ದೇಶನ ನೀಡಿದ್ದೇನೆ. ಇದರಲ್ಲಿ ತಪ್ಪೇನು’ ಎಂದು ಕೋಳಿವಾಡ ಪ್ರಶ್ನಿಸಿದರು.

**

ವಿಧಾನಸಭೆ ಸಚಿವಾಲಯ ವ್ಯಾಪ್ತಿಯಲ್ಲಿರುವ ಕಟ್ಟಡದಲ್ಲಿ ವಿಧಾನ ಪರಿಷತ್‌ ಸದಸ್ಯರೊಬ್ಬರಿಗೆ ಈ ಹಿಂದೆ ಕೊಠಡಿ ಹಂಚಿಕೆ ಮಾಡಿದ್ದೇ ತಪ್ಪು
– ಕೆ.ಬಿ. ಕೋಳಿವಾಡ, ವಿಧಾನಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.