ADVERTISEMENT

ಶಾಸಕರ ಹೊಲದಲ್ಲಿ 15 ಅಡಿ ಎತ್ತರದ ಜೋಳ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಹುಬ್ಬಳ್ಳಿ: ವೃತ್ತಿಯಲ್ಲಿ ರಾಜಕಾರಣಿಯಾದರೂ ಕೃಷಿಯನ್ನು ಪ್ರವೃತ್ತಿಯಾಗಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಮ್ಮ ಜಮೀನಿನಲ್ಲಿ 15 ಅಡಿಗೂ ಎತ್ತರದ ಬಿಳಿ ಜೋಳ ಬೆಳೆದು ದಾಖಲೆ ಬರೆದಿದ್ದಾರೆ.

ತಾಲ್ಲೂಕಿನ ಛಬ್ಬಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ~ನಿಸರ್ಗ~ ಹೆಸರಿನ 33 ಎಕರೆ ವಿಸ್ತಾರದ ಫಾರ್ಮ್ ಹೊಂದಿರುವ ಹೊರಟ್ಟಿ, 12 ಎಕರೆಯಲ್ಲಿ ನಂದ್ಯಾಲ ತಳಿಯ ಬಿಳಿ ಜೋಳ ಬೆಳೆದಿದ್ದಾರೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ಆರ್.ಹಂಚಿನಾಳ ನೇತೃತ್ವದ ಕೃಷಿ ತಜ್ಞರು

ಭಾನುವಾರ ಹೊರಟ್ಟಿ ಅವರ ಜಮೀನಿನಲ್ಲಿ ಮುಗಿಲೆತ್ತರ ಬೆಳೆದ ಜೋಳದ ಬೆಳೆ ವೀಕ್ಷಿಸಿದರು.
ಕೊಳವೆಬಾವಿ ನೀರಿನ ಆಶ್ರಯದಲ್ಲಿ ಜೋಳ ಬೆಳೆಯಲಾಗಿದ್ದು, ಜಮೀನಿನಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿರುವುದರಿಂದ ಅಂತರ್ಜಲ  ಮರುಪೂರಣಗೊಂಡ ಪರಿಣಾಮ ಬರಗಾಲದ ಪರಿಸ್ಥಿತಿಯಲ್ಲೂ ನೀರಿನ ಲಭ್ಯತೆ ಸಮೃದ್ಧವಾಗಿದೆ.

ಬಹುತೇಕ ಮೇವಿಗಾಗಿ ನಂದ್ಯಾಲ ತಳಿಯ ಜೋಳವನ್ನು ಬೆಳೆದರೂ ಉತ್ತಮ ಗಾತ್ರದ ತೆನೆಗಟ್ಟಿದ್ದು, ಎಕರೆಗೆ ಎರಡು ಟ್ಯಾಕ್ಟರ್ ಜೋಳದ ದಂಟಿನ ಮೇವು ಹಾಗೂ 8ರಿಂದ 10 ಕ್ವಿಂಟಲ್ ಜೋಳ ದೊರೆಯಲಿದೆ ಎಂದು ಹೊರಟ್ಟಿ ಅವರು ಕೃಷಿ ವಿವಿಯ ತಜ್ಞರಿಗೆ ಮಾಹಿತಿ ನೀಡಿದರು.

ಜೋಳದ ಫಸಲಿನ ನಡುವೆ ಮಿಶ್ರ ಬೆಳೆಯಾಗಿ ತೊಗರಿ ಬೆಳೆಯಲಾಗಿದೆ. ಇಲ್ಲಿಯ ಮೇವನ್ನು ತಮ್ಮ ಫಾರ್ಮ್ ಹೌಸ್‌ನಲ್ಲಿ ಸಾಕಲಾಗಿರುವ 130ಕ್ಕೂ ಹೆಚ್ಚು ದನಗಳಿಗೆ ಆಹಾರವಾಗಿ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.

ಬೀಜವಾಗಿ ಬಳಕೆ: ಬರ ಪರಿಸ್ಥಿತಿ ತಾಳಿಕೊಂಡು ಉತ್ತಮ ಫಸಲು ನೀಡುವ ನಂದ್ಯಾಲ ಈ ತಳಿಯನ್ನು ಮತ್ತೆ ಈ ಭಾಗದಲ್ಲಿ ಪರಿಚಯಿಸಲು ಬಸವರಾಜ ಹೊರಟ್ಟಿ ಅವರ ಜಮೀನಿನ ಜೋಳವನ್ನು ಬೀಜವಾಗಿ ರೈತರಿಗೆ ನೀಡಲು ಕೃಷಿ ವಿ.ವಿ ಬಳಕೆ ಮಾಡಿಕೊಳ್ಳಲಿದೆ ಎಂದು ಕುಲಪತಿ ಹಂಚಿನಾಳ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT