ADVERTISEMENT

ಶಾಸಕ ಎಂ.ಶ್ರೀನಿವಾಸ್ ಮೇಲೆ ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 26 ಮೇ 2012, 19:30 IST
Last Updated 26 ಮೇ 2012, 19:30 IST
ಶಾಸಕ ಎಂ.ಶ್ರೀನಿವಾಸ್ ಮೇಲೆ ಲೋಕಾಯುಕ್ತ ದಾಳಿ
ಶಾಸಕ ಎಂ.ಶ್ರೀನಿವಾಸ್ ಮೇಲೆ ಲೋಕಾಯುಕ್ತ ದಾಳಿ   

ಬೆಂಗಳೂರು: ಅಕ್ರಮ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ರಾಜರಾಜೇಶ್ವರಿನಗರ ಶಾಸಕ ಎಂ.ಶ್ರೀನಿವಾಸ್, ಸ್ಥಿರಾಸ್ತಿ ಒಡೆತನ ಮತ್ತು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಭಾರಿ ಪ್ರಮಾಣದ ದಾಖಲೆಗಳನ್ನು ಬೆಂಬಲಿಗರೊಬ್ಬರ ಮನೆಯ ಗ್ಯಾರೇಜ್‌ನಲ್ಲಿ ಬಚ್ಚಿಟ್ಟಿರುವುದನ್ನು ಲೋಕಾಯುಕ್ತ ಪೊಲೀಸರು ಶನಿವಾರ ಪತ್ತೆಹಚ್ಚಿದ್ದಾರೆ.

ಕನಕಪುರ ತಾಲ್ಲೂಕಿನ ಕಲ್ಲಹಳ್ಳಿಯ ದಿನೇಶ್ ಎಂಬುವರು ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಈ ಸಂಬಂಧ ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಮತ್ತು ಇತರರ ವಿರುದ್ಧ ಮೇ 7ರಂದು ಲೋಕಾಯುಕ್ತ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದರು.
ಶನಿವಾರ ನಗರದ ಎಂಟು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿ, ಶೋಧ ನಡೆಸಿದರು.

ಕುಮಾರಸ್ವಾಮಿ ಬಡಾವಣೆಯ ರಾಜ್ಯೋತ್ಸವನಗರದ ರಾಜಣ್ಣ ಎಂಬುವರು ಶ್ರೀನಿವಾಸ್ ಅವರ ಕಟ್ಟಾ ಬೆಂಬಲಿಗರು. ಅವರ ಮೇಲೂ ಲೋಕಾಯುಕ್ತ ಪೊಲೀಸರು ನಿಗಾ ಇಟ್ಟಿದ್ದರು. 

ಶನಿವಾರ ರಾಜಣ್ಣ ಮನೆಯ ಮೇಲೆ ದಾಳಿ ನಡೆಸಿದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಗಿರೀಶ್ ಮತ್ತು ಇನ್‌ಸ್ಪೆಕ್ಟರ್ ರೇಣುಕಾಪ್ರಸಾದ್ ಶೋಧ ಕಾರ್ಯ ನಡೆಸಿದರು.

ಮನೆಯಲ್ಲಿ ಯಾವುದೇ ದಾಖಲೆ, ಆಸ್ತಿಪಾಸ್ತಿ ದೊರೆತಿರಲಿಲ್ಲ. ಅಲ್ಲಿಂದ ನಿರ್ಗಮಿಸುವ ಮುನ್ನ ಗ್ಯಾರೇಜ್‌ನಲ್ಲೂ ಪರಿಶೀಲನೆಗೆ ನಿರ್ಧರಿಸಿದರು.

ಗ್ಯಾರೇಜ್‌ನ ಬಾಗಿಲಿನ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಮೂರು ಸೂಟ್‌ಕೇಸ್‌ಗಳಲ್ಲಿ ದಾಖಲೆಗಳನ್ನು ಇರಿಸಿರುವುದು ಪರಿಶೀಲನೆ ವೇಳೆ ಪತ್ತೆಯಾಯಿತು. ಶ್ರೀನಿವಾಸ್ ಮತ್ತು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ವಿವಿಧೆಡೆ ಖರೀದಿಸಿರುವ ಸ್ಥಿರಾಸ್ತಿಯ ದಾಖಲೆಗಳು, ಬ್ಯಾಂಕ್ ಪಾಸ್ ಪುಸ್ತಕಗಳು, ಹೂಡಿಕೆಗೆ ಸಂಬಂಧಿಸಿದ ದಾಖಲೆಗಳು ಈ ಸೂಟ್‌ಕೇಸ್‌ನಲ್ಲಿದ್ದವು.

ನಾಲ್ಕು ಗಂಟೆಗೂ ಹೆಚ್ಚು ಕಾಲ ಮಹಜರು ಪ್ರಕ್ರಿಯೆ ನಡೆಸಲಾಯಿತು. ಈ ದಾಖಲೆಗಳಲ್ಲಿ ಉಲ್ಲೇಖವಾಗಿರುವ ಆಸ್ತಿಗಳು ಮತ್ತು ಹೂಡಿಕೆಯ ಮೊತ್ತವನ್ನು ಕ್ರೋಡೀಕರಿಸಲು ಸಾಧ್ಯವಾಗಿಲ್ಲ. ಸೋಮವಾರದ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಲೋಕಾಯುಕ್ತದ ಉನ್ನತ ಮೂಲಗಳು ತಿಳಿಸಿವೆ.

ಜಯನಗರದಲ್ಲಿರುವ ಶ್ರೀನಿವಾಸ್ ನಿವಾಸದಲ್ಲಿ ಒಂದು ಮನೆ, ಎರಡು ನಿವೇಶನ, ಎರಡು ಕೈಗಾರಿಕಾ ಶೆಡ್, ಕನಕಪುರ ಮುಖ್ಯ ರಸ್ತೆಯಲ್ಲಿರುವ ಆರ್.ಎಂ.ಎಸ್. ಇಂಟರ್‌ನ್ಯಾಷನಲ್ ಶಾಲೆಯ ಒಡೆತನದ ದಾಖಲೆಗಳು, 48.39 ಎಕರೆ ಜಮೀನಿನ ಒಡೆತನದ ದಾಖಲೆಗಳು, ರೂ 1 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳಲ್ಲಿ ರೂ 54.06 ಲಕ್ಷ ಠೇವಣಿ ಇರಿಸಿರುವ ದಾಖಲೆ ಮತ್ತು 690 ಗ್ರಾಂ. ಚಿನ್ನ ಪತ್ತೆಯಾಗಿದೆ. ಕಚೇರಿಯಲ್ಲೂ ಸ್ಥಿರಾಸ್ತಿ ಒಡೆತನದ ದಾಖಲೆಗಳು ದೊರೆತಿವೆ.

ಶಾಸಕರ ಪುತ್ರ, ಪಾಲಿಕೆ ಸದಸ್ಯ ವೆಂಕಟೇಶ್ ಬಾಬು ವಾಸವಿರುವ ಫ್ಲ್ಯಾಟ್‌ನಲ್ಲಿ, ಕಗ್ಗಲೀಪುರದಲ್ಲಿ 16.19 ಎಕರೆ ಜಮೀನು ಹೊಂದಿರುವ ದಾಖಲೆ ಲಭ್ಯವಾಗಿದೆ. ವಾಸವಿರುವ ಫ್ಲ್ಯಾಟ್‌ನ ಕ್ರಯಪತ್ರ, ನಾಲ್ಕು ಕೈಗಾರಿಕಾ ಶೆಡ್‌ಗಳ ದಾಖಲೆ, ಟೊಯೊಟಾ ಕರೋಲಾ, ಇನ್ನೋವಾ ಮತ್ತು ಮಾರುತಿ ಸ್ವಿಫ್ಟ್ ಕಾರು, ಟ್ರ್ಯಾಕ್ಟರ್ ಒಡೆತನದ ದಾಖಲೆಗಳು, ರೂ 47,500 ನಗದು, ಹತ್ತು ಕೆ.ಜಿ. ಬೆಳ್ಳಿ, 2 ಕೆ.ಜಿ. ಚಿನ್ನ ದೊರೆತಿದೆ. ಶಾಸಕರ ಕುಟುಂಬದ ವಿರುದ್ಧದ ಆರೋಪಗಳನ್ನು ಖಚಿತಪಡಿಸುವಂತಹ ದಾಖಲೆಗಳೂ ಲಭ್ಯವಾಗಿವೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

ನಾಗರಬಾವಿ ಎರಡನೇ ಹಂತದಲ್ಲಿರುವ ವೆಂಕಟೇಶ್‌ಬಾಬು ಅವರ ಕಚೇರಿಯಲ್ಲೂ ಶೋಧ ನಡೆಸಲಾಗಿದೆ. ಸ್ಥಿರಾಸ್ತಿ ಒಡೆತನಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಅಲ್ಲಿಂದ ತನಿಖಾ ತಂಡ ವಶಕ್ಕೆ ಪಡೆದಿದೆ.

ಕದಿರೇನಹಳ್ಳಿಯಲ್ಲಿರುವ ಶ್ರೀನಿವಾಸ್ ಅವರ ಬೆಂಬಲಿಗ ನಾಗರಾಜು ಅವರ ಮನೆ ಮತ್ತು ವಾಣಿಜ್ಯ ಮಳಿಗೆಯ ಮೇಲೂ ದಾಳಿ ನಡೆದಿದೆ. ಅಲ್ಲಿಯೂ ಕೆಲ ದಾಖಲೆಗಳು ದೊರೆತಿವೆ. ಆರ್.ಎಂ.ಎಸ್. ಇಂಟರ್‌ನ್ಯಾಷನಲ್ ಶಾಲೆಯಲ್ಲೂ ಶೋಧ ನಡೆದಿದ್ದು, ಹಲವು ದಾಖಲೆಗಳು ಪತ್ತೆಯಾಗಿವೆ.

ಹೊಸಕೆರೆಹಳ್ಳಿ ಬಳಿಯ ದ್ವಾರಕಾನಗರದಲ್ಲಿರುವ ರಶ್ಮಿ ಡಿಸೋಜಾ ಮನೆಯಲ್ಲೂ ಶ್ರೀನಿವಾಸ್‌ಗೆ ಸಂಬಂಧಿಸಿದ ದಾಖಲೆಗಳಿರಬಹುದು ಎಂದು ತನಿಖಾ ತಂಡ ಶಂಕಿಸಿದೆ. ಅಲ್ಲಿಯೂ ಶೋಧ ನಡೆಸಲು ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ತಪಾಸಣಾ ವಾರೆಂಟ್ ಪಡೆಯಲಾಗಿತ್ತು. ಆದರೆ, ಮನೆಗೆ ಕೀಲಿ ಹಾಕಿದ್ದು ಯಾರೂ ಇರಲಿಲ್ಲ. ಮನೆಯ ಬೀಗವನ್ನು ಮೊಹರು ಮಾಡಲಾಗಿದೆ.

ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಡಿವೈಎಸ್‌ಪಿಗಳಾದ ಪ್ರಸನ್ನ ವಿ.ರಾಜು, ಎಚ್.ಎಸ್.ಮಂಜುನಾಥ್, ಎಸ್.ಗಿರೀಶ್, ಅಬ್ದುಲ್ ಅಹದ್, ಡಿ.ಫಾಲಾಕ್ಷಪ್ಪ, ಇನ್‌ಸ್ಪೆಕ್ಟರ್‌ಗಳಾದ ಕೆ.ರವಿಶಂಕರ್, ಎಸ್.ಟಿ.ಒಡೆಯರ್, ಎಸ್.ಟಿ.ಯೋಗೇಶ್, ಶಿವಶಂಕರ್, ಟಿ.ಸಂಜೀವರಾಯಪ್ಪ, ರೇಣುಕಾಪ್ರಸಾದ್, ಅನಿಲ್‌ಕುಮಾರ್, ಕೆ.ಅಂಜನ್‌ಕುಮಾರ್, ನಿರಂಜನ್‌ಕುಮಾರ್, ಪಿ.ನರಸಿಂಹಮೂರ್ತಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.