
ಶಿಕಾರಿಪುರ (ಶಿವಮೊಗ್ಗ ಜಿಲ್ಲೆ): ಕಾಡಿನಿಂದ ದಾರಿ ತಪ್ಪಿ ನಾಡಿಗೆ ಬಂದ ಒಂದು ಹುಲಿ ನಡೆಸಿದ ದಾಳಿಯಿಂದ ಒಬ್ಬ  ಮೃತಪಟ್ಟು ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಗಾಮ ಗ್ರಾಮದ ಸಮೀಪ ಭಾನುವಾರ ನಡೆದಿದೆ.
ಗ್ರಾಮದ ಮುನೀರ್ (58) ಮೃತಪಟ್ಟ ವ್ಯಕ್ತಿ. ಇದೇ ಗ್ರಾಮದ ನಾಗರಾಜ್, ಈಸೂರು ಗ್ರಾಮದ ರಘು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಿಗ್ಗೆ ಈಸೂರಿನಿಂದ ಶಿಕಾರಿಪುರ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವ್ಯಕ್ತಿಯು ರಸ್ತೆ ಮಧ್ಯೆ ಹುಲಿ ಹಾದು ಹೋಗಿದ್ದನ್ನು ಕಂಡು ಸಮೀಪದ ತೋಟದ ಮನೆಯವರಿಗೆ ವಿಷಯ ತಿಳಿಸಿದ್ದಾರೆ.
ಬೆಳಿಗ್ಗೆ 6 ಗಂಟೆಯಿಂದ ಊರಿನ ಸುತ್ತಮುತ್ತ ಹುಲಿ ತಿರುಗಾಡುತ್ತಿದ್ದುದನ್ನು ಕಂಡ ಜನರು ಭಯಭೀತರಾಗಿ ಗ್ರಾಮಸ್ಥರಿಗೆ ವಿಷಯ ತಿಳಿಸಿದರು. ಕುತೂಹಲಗೊಂಡು ಸುತ್ತಮುತ್ತಲ ಗ್ರಾಮದ ಜನರು ಹುಲಿ ವೀಕ್ಷಿಸಲು ತಂಡೋಪತಂಡವಾಗಿ ಜಮಾಯಿಸಿದ್ದರು. ಜನ ಜಂಗುಳಿಯನ್ನು ನಿಯಂತ್ರಿಸಲು ಪೊಲೀಸರು, ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟರು.
ಹುಲಿ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವನ್ಯಜೀವಿ ವಿಭಾಗದವರು ಸ್ಥಳಕ್ಕೆ ಆಗಮಿಸಿದರು. ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾದ ಕಾರ್ಯಾಚರಣೆ ಸಂಜೆ 6ರ ವೇಳೆಗೆ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಹಿಡಿದು ಬೋನಿಗೆ ಹಾಕುವ ಮೂಲಕ ಮುಕ್ತಾಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.