ADVERTISEMENT

ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಛೀಮಾರಿ ಹಾಕಿ

ಸಚಿವರಿಗೆ ಸಭಾಪತಿ ಶಂಕರಮೂರ್ತಿ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ಸುವರ್ಣಸೌಧ (ಬೆಳಗಾವಿ): ‘ಪ್ರತಿ ಬಾರಿ ಆದೇಶ ಹೊರಡಿಸುವಾಗ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳ ಸಿಬ್ಬಂದಿ ನಡುವೆ ತಾರತಮ್ಯ ಧೋರಣೆ ಅನುಸರಿಸುವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಛೀಮಾರಿ ಹಾಕಿ’ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ನಿರ್ದೇಶನ ನೀಡಿದ ಅಪರೂಪದ ವಿದ್ಯಮಾನ ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ನಡೆಯಿತು.

ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಕರಿಗೆ ‘ಗ್ರೇಡ್–-೧’ ವೇತನ ನಿಗದಿಗೊಳಿಸಿ ಆದೇಶ ಹೊರಡಿಸಿದ್ದರೂ, ಅನುದಾನಿತ ಶಾಲೆಗಳ ಶಿಕ್ಷಕರಿಗೆ ಅದನ್ನು ವಿಸ್ತರಿಸದಿ­ರುವ ಕುರಿತು ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಪ್ರಶ್ನೆ ಕೇಳಿದರು. ಉತ್ತರ ನೀಡಿದ ಸಚಿವರು, ‘ಅನುದಾನಿತ ಶಾಲೆಗಳ ಶಿಕ್ಷಕರಿಗೆ ಈ ಸೌಲಭ್ಯ ವಿಸ್ತರಿಸುವ ವಿಷಯ ಪರಿಶೀಲನೆಯಲ್ಲಿದೆ’ ಎಂದರು.

ಸಚಿವರ ಉತ್ತರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೊರಟ್ಟಿ, ‘ಅನುದಾನಿತ ಶಾಲೆಗಳ ಶಿಕ್ಷಕರ ವಿಷಯದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವಾಗಲೂ ತಾರತಮ್ಯ ಮಾಡುತ್ತಾರೆ. ಹೆರಿಗೆ ರಜೆಯ ವಿಷಯದಲ್ಲೂ ಇದೇ ಧೋರಣೆ ಇದೆ. ಈ ಅಧಿಕಾರಿಗಳಿಗೆ ತಲೆ ಕೆಟ್ಟಿದೆ. ಅವರು ಮನಸ್ಸಿಗೆ ಬಂದಹಾಗೆ ತೀರ್ಮಾನ ಕೈಗೊಳ್ಳುತ್ತಾರೆ. ಹಣಕಾಸು ಇಲಾಖೆ ಅಧಿಕಾರಿಗಳಂತೂ ಅವರ ಅನುಕೂಲಕ್ಕೆ ತಕ್ಕಂತೆ ಅಭಿಪ್ರಾಯ ನೀಡುತ್ತಾರೆ’ ಎಂದು ಹರಿಹಾಯ್ದರು.

ತಕ್ಷಣ ಮಧ್ಯ ಪ್ರವೇಶಿಸಿದ ಸಭಾಪತಿಯವರು, ‘ಶಿಕ್ಷಣ ಇಲಾಖೆ  ಅಧಿಕಾರಿಗಳ ತಾರತಮ್ಯ  ಮಿತಿ ಮೀರುತ್ತಿದೆ. ಪ್ರತಿ ಬಾರಿಯೂ ಅಧಿವೇಶನದಲ್ಲಿ ಈ ವಿಷಯ ಚರ್ಚೆಗೆ ಬರುತ್ತಿದೆ.

ಎಲ್ಲ ಆದೇಶಗಳಲ್ಲೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದು ಸರ್ಕಾರ, ಸಮಾಜಕ್ಕೆ ಗೌರವ ತರುವ ಸಂಗತಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದಕ್ಕೆ ಅಧಿಕಾರಿಗಳೇ ಹೊಣೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇಂತಹ ಆದೇಶಗಳಿಗೆ ಸಹಿ ಮಾಡುವ ಅಧಿಕಾರಿಗಳನ್ನು ಹೊಣೆ ಮಾಡಿ. ಅವರಿಗೆ ಛೀಮಾರಿ ಹಾಕಿ.

ಇಲ್ಲವಾದರೆ ನಾನೇ ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ವಿಸ್ತರಣೆಗೆ ಕ್ರಮ: ಬಳಿಕ ಉತ್ತರ ನೀಡಿದ ಸಚಿವರು, ‘ಇದು ನಾನು ಸಚಿವನಾದ ಬಳಿಕ ಕೈಗೊಂಡ ನಿರ್ಧಾರ ಅಲ್ಲ.
ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೂ ಗ್ರೇಡ್–-೧ ವೇತನ ವಿಸ್ತರಿಸುವ ತೀರ್ಮಾನವನ್ನು ತ್ವರಿತವಾಗಿ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.