ADVERTISEMENT

ಶಿಗ್ಗಾವಿಯಲ್ಲಿ ಜಾನಪದ ವಿವಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 18:55 IST
Last Updated 24 ಫೆಬ್ರುವರಿ 2011, 18:55 IST

ಬೆಂಗಳೂರು: ಜಾನಪದ ವಿಶ್ವವಿದ್ಯಾಲಯದ ಕೇಂದ್ರ ಕಚೇರಿಯನ್ನು ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಸ್ಥಾಪಿಸುವುದಾಗಿ ಬಜೆಟ್ ಮಂಡನೆ ವೇಳೆ ಸರ್ಕಾರ ಪ್ರಕಟಿಸಿದೆ. ಹೊರ ದೇಶಗಳ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆ ಹಾಗೂ ಆರ್ಥಿಕವಾಗಿ ಅಶಕ್ತರಾದ ಲೇಖಕರ ಕೃತಿ ಪ್ರಕಟಣೆಗೆ ನಿರ್ಧರಿಸಲಾಗಿದೆ.

ಬಸವ ಅಂತರರಾಷ್ಟ್ರೀಯ ಕೇಂದ್ರ ಸ್ಥಾಪನೆ ಹಾಗೂ 2011-12ನೇ ಸಾಲಿನಲ್ಲಿ ಸಾಂಸ್ಕೃತಿಕ ಸಂಘಗಳಿಗಾಗಿ ತಲಾ 25 ಕೋಟಿ ರೂಪಾಯಿ ಒದಗಿಸಲು ನಿರ್ಧರಿಸಲಾಗಿದೆ. ವಿದೇಶಗಳಲ್ಲಿರುವ ವೂಜ್‌ಬರ್ಗ್ ವಿವಿ, ಹೈಡಲ್‌ಬರ್ಗ್ ವಿವಿ, ಮ್ಯೂನಿಕ್ ವಿವಿ ಹಾಗೂ ವಿಯೆನ್ನಾ ವಿವಿಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಲು ತಲಾ ಒಂದು ಕೋಟಿ ರೂಪಾಯಿ ನೀಡಲು ಉದ್ದೇಶಿಸಿದೆ.ಆರ್ಥಿಕವಾಗಿ ಅಶಕ್ತರಾಗಿರುವ ಕನ್ನಡದ ಬರಹಗಾರರಿಗೆ ತಮ್ಮ ಕೃತಿಗಳನ್ನು ಪ್ರಕಟಿಸಲು ನೆರವಾಗುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಮುಖಾಂತರ 5 ಕೋಟಿ ರೂಪಾಯಿಗಳ ಸಹಾಯ ಅನುದಾನವನ್ನು ಮೀಸಲಿರಿಸಲಾಗಿದೆ.

ಮಾರ್ಚ್‌ನಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಬೆಳಗಾವಿಯಲ್ಲಿ ಗಾಜಿನ ಮನೆ ಹಾಗೂ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ನಗರದಲ್ಲಿ ಸಾಹಿತ್ಯ ಭವನ ನಿರ್ಮಿಸಲು ತಲಾ 5 ಕೋಟಿ ರೂಪಾಯಿಗಳನ್ನು ಒದಗಿಸಲಾಗುತ್ತಿದೆ. ಕುವೆಂಪು ದರ್ಶನ ಭವನ, ವಸ್ತು ಸಂಗ್ರಹಾಲಯ ಹಾಗೂ ‘ಸಾಹಿತಿಗಳ ನೆನಪಿನಂಗಳ’ ಸ್ಮಾರಕ ನಿರ್ಮಾಣಕ್ಕೆ ಪ್ರಾರಂಭಿಕವಾಗಿ 5 ಕೋಟಿ ರೂಪಾಯಿ ನೀಡಲಾಗುತ್ತಿದೆ. 

ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ನಗರದಲ್ಲಿ ಭುವನೇಶ್ವರಿ ಮೂರ್ತಿ ಸ್ಥಾಪನೆಗಾಗಿ 25 ಕೋಟಿ ರೂಪಾಯಿ, ಹಾಗೂ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಕಲಾಭವನ ನಿರ್ಮಾಣಕ್ಕಾಗಿ ತಲಾ 10 ಕೋಟಿ ರೂಪಾಯಿ ನೀಡಲು ಉದ್ದೇಶಿಸಿದೆ.

ಮೈಸೂರು ದಸರಾವನ್ನು ನಾಡಹಬ್ಬವಾಗಿ ಆಚರಿಸಲು 10 ಕೋಟಿ ರೂಪಾಯಿ ಮೀಸಲಿಡಲಾಗಿದ್ದು ಬಸವ, ಕನಕ, ಅಂಬೇಡ್ಕರ್ ಹಾಗೂ ವಾಲ್ಮೀಕಿ ಜಂತಿ ಆಚರಣೆಗಾಗಿ ಜಿಲ್ಲಾ ಮಟ್ಟದಲ್ಲಿ 50 ಸಾವಿರ ಹಾಗೂ ತಾಲ್ಲೂಕು ಮಟ್ಟದಲ್ಲಿ 25 ಸಾವಿರ ನೀಡಲು ಸರ್ಕಾರ ಮುಂದಾಗಿದೆ.

ಖಾಸಗಿ ಸಹಭಾಗಿತ್ವದಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತೀಯ ಪರಂಪರೆ ಉದ್ಯಾನ ನಿರ್ಮಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ ಈ ಸಾಲಿನಲ್ಲಿ ಸರ್ಕಾರದ ವತಿಯಿಂದ 10 ಕೋಟಿ ರೂಪಾಯಿ ನೀಡಲಾಗುತ್ತಿದೆ. ಜಾನಪದ ಕಲೆಗಳ ಸಂರಕ್ಷಣೆಗೆ ಶ್ರಮಿಸುತ್ತಿರುವ ಕರ್ನಾಟಕ ಜಾನಪದ ಪರಿಷತ್ತಿಗೆ 1 ಕೋಟಿ ರೂಪಾಯಿ ನೀಡಲು ಸರ್ಕಾರ ಮುಂದಾಗಿದೆ.

ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿ, ಎಸ್. ನಿಜಲಿಂಗಪ್ಪ ಸ್ಮಾರಕದ ಸಂಶೋಧನಾ ಚಟುವಟಿಕೆಗಳಿಗಾಗಿ ತಲಾ 5 ಕೋಟಿ ರೂಪಾಯಿ, ಲಂಡನ್‌ನಲ್ಲಿ ಬಸವ ಪುತ್ಥಳಿ ಸ್ಥಾಪನೆ ಹಾಗೂ ಹುಬ್ಬಳ್ಳಿಯ ವರ್ಲ್ಡ್ ರಿನ್ಯೂವಲ್ ಸ್ಪಿರುಚುವಲ್ ಟ್ರಸ್ಟ್‌ಗೆ ತಲಾ 3 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಚಲನಚಿತ್ರ ಹಾಸ್ಯ ಕಲಾವಿದ ಟಿ.ಆರ್. ನರಸಿಂಹರಾಜು ಅವರ ಸ್ಮರಣಾರ್ಥ ಕಲಾಮಂದಿರ ಸ್ಥಾಪನೆ, ಬಳ್ಳಾರಿಯಲ್ಲಿ ರಂಗ ತೋರಣ ಸಂಸ್ಥೆ ಮೂಲಕ ರಂಗ ಮಂದಿರ ನಿರ್ಮಾಣಕ್ಕೆ ಹಾಗೂ ಸಂಸ್ಕೃತ ವಿಕಿಪಿಡಿಯಾ ಅಭಿವೃದ್ಧಿಗಾಗಿ ಸಂಸ್ಕೃತ ಭಾರತಿಗೆ ತಲಾ 1 ಕೋಟಿ ರೂಪಾಯಿ ಇರಿಸಲಾಗಿದೆ.

ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಲಾಗುತ್ತಿರುವ ಶೈಕ್ಷಣಿಕ ಸಮುಚ್ಚಯಕ್ಕಾಗಿ 1 ಕೋಟಿ ರೂಪಾಯಿ, ಹಾಗೂ ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಾರಿಗೆ ಸೌಲಭ್ಯಕ್ಕೆ ಬಸ್‌ಗಳನ್ನು ಖರೀದಿಸಲು 50 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದೆ.

ಇದೇ ವೇಳೆ ದೆಹಲಿ ಕರ್ನಾಟಕ ಸಂಘಕ್ಕೆ 1 ಕೋಟಿ ರೂಪಾಯಿ ಒದಗಿಸಲಾಗುತ್ತಿದೆ. ರಾಜ್ಯಸಭಾ ಸದಸ್ಯರಾಗಿದ್ದ ರಾಜಶೇಖರ ಮೂರ್ತಿ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾರಂಭಿಸಿರುವ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ 2 ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. 

ಹುಬ್ಬಳ್ಳಿಯಲ್ಲಿ ಗಂಗೂಬಾಯಿ ಹಾನಗಲ್ ಸಂಗೀತ ಶಾಲೆ ನಿರ್ವಹಣೆ, ಕೆಂಗೇರಿಯಲ್ಲಿ ಮಹಾತ್ಮ ಗಾಂಧಿ ಸ್ಮಾರಕ, ಡಾ.ಪಂಡಿತ ಪುಟ್ಟರಾಜ ಗವಾಯಿ ಸ್ಮಾರಕ ನಿರ್ಮಾಣ ಹಾಗೂ ರಂಗಾಯಣದ ಚಟುವಟಿಕೆಗಳ ಪ್ರಗತಿಗಾಗಿ ಕಳೆದ ವರ್ಷ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.