ADVERTISEMENT

ಶಿಡ್ಲಘಟ್ಟದಲ್ಲಿ ಯೂರೋಪ್ ಅತಿಥಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST
ಶಿಡ್ಲಘಟ್ಟದಲ್ಲಿ ಯೂರೋಪ್ ಅತಿಥಿ
ಶಿಡ್ಲಘಟ್ಟದಲ್ಲಿ ಯೂರೋಪ್ ಅತಿಥಿ   

ಶಿಡ್ಲಘಟ್ಟ: ಪ್ರತಿ ವರ್ಷದಂತೆ ಈ ಬಾರಿಯೂ ಶಿಡ್ಲಘಟ್ಟಕ್ಕೆ ಯೂರೋಪ್ ಮತ್ತು ಉತ್ತರ ಭಾರತದಿಂದ ಅತಿಥಿಗಳ ಆಗಮನವಾಗಿದೆ. ಅತಿಥಿಗಳು ಬಂದಿರುವುದು ಶಿಡ್ಲಘಟ್ಟದ ಹೊರವಲಯದಲ್ಲಿರುವ ಅಮ್ಮನ ಕೆರೆಗೆ. ಅತಿಥಿಗಳಾಗಿ ಬಂದಿರುವುದು ಪುಟ್ಟ ಆಕಾರದ ಹಕ್ಕಿಗಳು.

`ಸ್ಪಾಟೆಡ್ ಸ್ಯಾಂಡ್ ಪೈಪರ್~ ಎಂಬ ಹಕ್ಕಿಯು ಯೂರೋಪ್‌ನಿಂದ ಆಗಮಿಸಿದ್ದರೆ, `ಲಿಟಲ್ ರಿಂಗ್ಡ್ ಪ್ಲೋವರ್~ ಎಂಬ ಹಕ್ಕಿಯು ಉತ್ತರ ಭಾರತದಿಂದ ಬಂದಿದೆ. ಚಳಿಗಾಲದ ಅತಿಥಿಗಳಾಗಿ ಅಮ್ಮನಕೆರೆಯಲ್ಲಿ ಬೀಡು ಬಿಟ್ಟಿರುವ ಈ ಹಕ್ಕಿಗಳಲ್ಲಿ ಕೆಲವು ಜೋಡಿಗಳಲ್ಲಿ ಕಂಡು ಬಂದರೆ, ಮಿಕ್ಕವು ಒಂಟಿಯಾಗಿ  ಆಹಾರಕ್ಕೆ ಜಾಲಾಡುತ್ತಿರುತ್ತವೆ.

ಈ ಬಾರಿ ಮಳೆ ಕಡಿಮೆಯಾದ ಕಾರಣ ಅಮ್ಮನಕೆರೆಯಲ್ಲಿ ನೀರು ತುಂಬ ಕಡಿಮೆಯಾಗಿದೆ. ಅಲ್ಲಲ್ಲಿ ನೀರಿನ ಹೊಂಡದಂತೆ ಕಂಡು ಬರುವ ಜಲಸೆಲೆಗಳಲ್ಲಿಯೇ ಈ ವಲಸೆ ಹಕ್ಕಿಗಳು ಆಹಾರಕ್ಕಾಗಿ ಹುಡುಕಾಟ ನಡೆಸಿವೆ.

`ಸ್ಪಾಟೆಡ್ ಸ್ಯಾಂಡ್ ಪೈಪರ್~ ಪುಟ್ಟ ಕೌಜು ಹಕ್ಕಿಯ ಗಾತ್ರವಿದೆ. ಕಂದು ಬಣ್ಣದ ಚುಕ್ಕೆಯ ಮಾದರಿಯ ರಚನೆಯು ಬೆನ್ನ ಮೇಲಿದ್ದರೆ, ಕುತ್ತಿಗೆಯಿಂದ ಕೆಳಗೆ ಹೊಟ್ಟೆಯ ಭಾಗವೆಲ್ಲ ಅಚ್ಚ ಬಿಳುಪಾಗಿದೆ. ಕಾಲುಗಳು ಹಳದಿ ಬಣ್ಣ, ಚೂಪಾದ ಕಪ್ಪು ಬಣ್ಣದ ಕೊಕ್ಕು ನೀರಿನಲ್ಲಿ ಆಹಾರವನ್ನು ಬೆದಕಲು ಅನುಕೂಲಕರವಾಗಿದೆ. ಕಣ್ಣಿನ ಮೇಲೆ ಬಿಳಿಯ ಬಣ್ಣದ ಹುಬ್ಬಿದೆ. ಬಾಲವನ್ನು ಮೇಲೆ ಕೆಳಗೆ ಆಡಿಸುತ್ತಾ ಹುಳು ಹುಪ್ಪಟೆಯನ್ನು ನೀರಿನಲ್ಲಿ ಹುಡುಕಿ ತಿನ್ನುತ್ತಿರುತ್ತದೆ.
`ಲಿಟಲ್ ರಿಂಗ್ಡ್ ಪ್ಲೋವರ್~ ಕೂಡ ಪುಟ್ಟ ಕೌಜು ಹಕ್ಕಿಯ ಗಾತ್ರದ್ದೇ. ಬಾಲ, ರೆಕ್ಕೆ, ಬೆನ್ನು, ತಲೆಯ ಭಾಗವೆಲ್ಲಾ ಕಂದುಬಣ್ಣ, ಹಳದಿ ಕಾಲುಗಳು, ಪುಟ್ಟ ಕಪ್ಪು ಕೊಕ್ಕನ್ನು ಹೊಂದಿದೆ. ಕುತ್ತಿಗೆಗೆ ಕಪ್ಪು ಬಣ್ಣದ ಪಟ್ಟಿಯನ್ನು ಕಟ್ಟಿಕೊಂಡಂತೆ ಕಾಣುವ ಗುರುತಿದೆ. ಗಡ್ಡಭಾಗ ಹಾಗೂ ಹೊಟ್ಟೆ ಅಚ್ಚ ಬಿಳುಪಿನಿಂದ ಕೂಡಿದೆ.

`ಈ ಎರಡೂ ಹಕ್ಕಿಗಳು ಸಂತಾನಾಭಿವೃದ್ಧಿಯನ್ನು ಮಾರ್ಚ್‌ನಿಂದ ಮೇ ತಿಂಗಳಿನಲ್ಲಿ ಮಾಡುತ್ತವೆ. ಅವುಗಳು ವಾಸಿಸುವ ಹಿಮಾಲಯ ಮತ್ತು ಯೂರೋಪ್ ದೇಶಗಳಲ್ಲಿ ಚಳಿ ಹೆಚ್ಚಾದಾಗ ಭಾರತ, ಪಾಕಿಸ್ತಾನ, ಶ್ರೀಲಂಕಾ ದೇಶಗಳಿಗೆ ಬರುತ್ತವೆ.

ನಮ್ಮಲ್ಲಿನ ಕೆರೆಗಳಿಗೂ ಅಷ್ಟು ದೂರದ ಹಕ್ಕಿಗಳು ಆಗಮಿಸುತ್ತವೆ ಎಂಬುದು ಸಂತಸದ ಸಂಗತಿ. ಕೆರಗಳಿಗೆ ಕಸ ಮುಂತಾದ ತ್ಯಾಜ್ಯ ಹಾಕದೇ, ಕಳೆ ಗಿಡಗಳನ್ನು ಬೆಳೆಯಲು ಬಿಡದೆ ಸ್ವಚ್ಛವಾಗಿಟ್ಟುಕೊಳ್ಳುವ ಅಗತ್ಯವಿದೆ~ ಎಂದು ಉಪನ್ಯಾಸಕ ಅಜಿತ್ ಕೌಂಡಿನ್ಯ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.