ADVERTISEMENT

ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 19:59 IST
Last Updated 1 ಜುಲೈ 2013, 19:59 IST

ಬೆಂಗಳೂರು: ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವ ಉದ್ದೇಶ ಇದೆ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡೀಸ್ ಸೋಮವಾರ ಇಲ್ಲಿ ತಿಳಿಸಿದರು.

ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು `ಅರಣ್ಯ ಮತ್ತು ಪರಿಸರ ಇಲಾಖೆಯ ತಕರಾರು ಇಲ್ಲದಿದ್ದರೆ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು' ಎಂದು ಅವರು ಹೇಳಿದರು.

`ಈ ಎರಡೂ ಇಲಾಖೆಗಳ ಒಪ್ಪಿಗೆ ಸಿಕ್ಕ ನಂತರ ಯೋಜನೆಯ ಕಾರ್ಯಸಾಧ್ಯತೆ ಬಗ್ಗೆ ವರದಿ ಪಡೆಯಲಾಗುವುದು. ಜಪಾನ್ ಇಂಟರ್‌ನ್ಯಾಷನಲ್ ಕೋ-ಆಪರೇಟಿವ್ ಏಜೆನ್ಸಿ (ಜೈಕಾ) ಹಣಕಾಸಿನ ನೆರವು ನೀಡಲು ಮುಂದೆ ಬಂದಿದೆ' ಎಂದು ಅವರು ವಿವರಿಸಿದರು.

`ಶಿರಾಡಿ ಘಾಟ್‌ನ ಹಲವು ಕಡೆ ಇನ್ನೂ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ. ಹಲವು ಕಡೆ ಮಳೆ ಇಲ್ಲದಿದ್ದರೂ ರಸ್ತೆಯಲ್ಲೇ ನೀರು ಉಕ್ಕುತ್ತಿದ್ದು, ಅದನ್ನು ತಪ್ಪಿಸಲು ಸಿಮೆಂಟ್ ರಸ್ತೆ ನಿರ್ಮಾಣ ಅನಿವಾರ್ಯ. ಅಂತಹ ಕಡೆ ತಕ್ಷಣ ನಿರ್ಮಾಣ ಕಾಮಗಾರಿಗೆ ಸಲಹೆ ನೀಡಲಾಗಿದೆ. ಒಟ್ಟಿನಲ್ಲಿ ಇದೊಂದಕ್ಕೊಂದು ಶಾಶ್ವತ ಪರಿಹಾರಕ್ಕೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ವಾಹನ ದಟ್ಟಣೆ ಹೆಚ್ಚು ಇರುವ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಘೋಷಿಸುವ ಕುರಿತು ಚರ್ಚೆ ನಡೆದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.