ADVERTISEMENT

ಶಿವಮೊಗ್ಗ: 19 ರಿಂದ ವಿಪ್ರ ಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 10 ಮೇ 2012, 19:30 IST
Last Updated 10 ಮೇ 2012, 19:30 IST

ಶಿವಮೊಗ್ಗ: ತ್ರಿಮತಸ್ಥ ಬ್ರಾಹ್ಮಣರ ವಿಪ್ರ ಜಾಗೃತಿ ಸಮಾವೇಶ, ಸಮಾಜದ ಹೊಸ ಆವಿಷ್ಕಾರಕ್ಕೆ ದಾರಿದೀಪವಾಗಲಿದೆ ಎಂದು ಅಖಿಲ ಭಾರತ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಕೆ. ದಿವಾಕರ್ ಅಭಿಪ್ರಾಯಪಟ್ಟರು.

ನಗರದ ಸೈನ್ಸ್ ಮೈದಾನದಲ್ಲಿ ಮೇ 19ರಿಂದ ಎರಡು ದಿನಗಳ ಕಾಲ ನಡೆಯುವ ವಿಪ್ರ ಜಾಗೃತಿ ಸಮಾವೇಶದ ವೇದಿಕೆ ನಿರ್ಮಾಣದ ಭೂಮಿಪೂಜೆಯಲ್ಲಿ ಗುರುವಾರ ಅವರು ಮಾತನಾಡಿದರು.

ತ್ರಿಮತಸ್ಥ ಬ್ರಾಹ್ಮಣ ಸಮಾಜ ಹಮ್ಮಿಕೊಂಡಿರುವ ಈ ವಿಪ್ರ ಜಾಗೃತಿ ಸಮಾವೇಶ ಇಡೀ ರಾಜ್ಯದಲ್ಲಿ ಮಾದರಿಯಾಗಲಿದೆ. ಇದರ ಯಶಸ್ಸಿಗೆ ಧನ ಸಹಾಯದ ಅಗತ್ಯವಿದ್ದು, ಬ್ರಾಹ್ಮಣ ಸಮಾಜದ ಸ್ಥಿತಿವಂತರು ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಬ್ರಾಹ್ಮಣ ಸಮಾಜದ ಕಾರ್ಯದರ್ಶಿ ನಟರಾಜ್ ಭಾಗವತ್ ಮಾತನಾಡಿ, ಕಳೆದ 6 ತಿಂಗಳಿಂದ ಸಮಾವೇಶ ನಡೆಸಲು ಸಿದ್ಧತೆಗಳು ನಡೆದಿದ್ದು, ಕನಿಷ್ಠ 25 ಸಾವಿರ ಜನ ಕುಳಿತುಕೊಳ್ಳುವ ಸಭಾಂಗಣ ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.

ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಎಲ್ಲಾ ಯತಿವರ್ಯರು ಸೇರಿಸುತ್ತಿದ್ದಾರೆ. ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಭೋಜನ ವ್ಯವಸ್ಥೆ, ನಗರದ 6 ರಿಂದ 8 ಕಲ್ಯಾಣ ಮಂದಿರಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಮೇ 13ರಂದು ವಿಪ್ರ ಸಮಾವೇಶದ ಬಗ್ಗೆ ಜಾಗೃತಿ ಮೂಡಿಸಲು ಸಂಜೆ 4ಕ್ಕೆ ಮೋಟಾರ್ ಬೈಕ್‌ರ‌್ಯಾಲಿ ಏರ್ಪಡಿಸಲಾಗಿದೆ ಎಂದು ಹೇಳಿದರು.

ಭೂಮಿಪೂಜೆಯನ್ನು ಹೋಟೆಲ್ ಉದ್ಯಮಿ ಮುರಳೀಧರ ಅರಸ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ.ವೆಂಕಟರಾವ್, ಸಮಾವೇಶ ಸಮಿತಿ ಅಧ್ಯಕ್ಷ ಬಿ.ವಿ. ರಾಮಸ್ವಾಮಿ, ನಗರಸಭಾ ಸದಸ್ಯ ಆರ್. ಪ್ರಸನ್ನಕುಮಾರ್, ಸಂಚಾಲಕ ಮ.ಸ. ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.