ADVERTISEMENT

ಶುಭ ಶುಕ್ರವಾರದಂದು ಭಕ್ತಿಯ ಮಳೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2011, 19:45 IST
Last Updated 22 ಏಪ್ರಿಲ್ 2011, 19:45 IST

ಬಳ್ಳಾರಿ: ಶುಭ ಶುಕ್ರವಾರದ ಅಂಗವಾಗಿ ನಗರದ ಸೇಂಟ್ ಆ್ಯಂಟನಿ ಚರ್ಚ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಶುಕ್ರವಾರ ಬೆಳಿಗ್ಗೆ ಸಾವಿರಾರು ಭಕ್ತರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕ್ರೈಸ್ತರು ಉಪವಾಸ ಆಚರಣೆ, ಪ್ರಾರ್ಥನೆ, ದಾನಧರ್ಮ ಪ್ರಕ್ರಿಯೆಯಲ್ಲಿ ತೊಡಗುವುದು ಈದಿನ ವಿಶೇಷವಾಗಿದ್ದು, ಶುಕ್ರವಾರ ಬೆಳಗಿನ ಜಾವವೇ ಚರ್ಚ್‌ಗಳತ್ತ ಧಾವಿಸಿದ ಭಕ್ತರು, ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ ಪ್ರಾರ್ಥನೆಯಲ್ಲಿ ತೊಡಗಿದರು.

ಶಿಲುಬೆಗೆ ಏರಿಸಿದ ಐತಿಹಾಸಿಕ ಘಟನೆಯೂ ಒಳಗೊಂಡಂತೆ ಏಸು ಕ್ರಿಸ್ತನ ಚರಿತ್ರೆಯನ್ನು ಸಾರುವ ರೂಪಕಗಳ ಪ್ರದರ್ಶನವನ್ನೂ ಕ್ರೈಸ್ತಬಾಂಧವರು ಆಯೋಜಸಿದ್ದರು.

ಜನರ ಶ್ರೇಯೋಭಿವೃದ್ಧಿಗಾಗಿ ಎಲ್ಲ ಸಂಕಷ್ಟಗಳನ್ನು ಎದುರಿಸಿದ ಯೇಸು, ಯಾತನೆಯನ್ನು ಅನುಭವಿಸಿ ಶಿಲುಬೆಗೆ ಏರಿದ ದುಃಖದಾಯಕ ಪ್ರಸಂಗವನ್ನು ಸೇಂಟ್ ಆ್ಯಂಟನಿ ಚರ್ಚ್‌ನಲ್ಲಿ ರೂಪಕದ ಮೂಲಕ ಪ್ರದರ್ಶಿಸಿದಾಗ ಅಲ್ಲಿ ನೆರೆದಿದ್ದ ಭಕ್ತರ ಕಣ್ಣಾಲಿಗಳು ತುಂಬಿಬಂದವು.

ಯೇಸುವಿನ ಬಂಧನ, ಕಿರುಕುಳ, ಚಾಟಿಯೇಟು, ಶಿಲುಬೆಗೆ ಏರಿಸಿದ ಹೃದಯವಿದ್ರಾವಕ ದೃಶ್ಯಾವಳಿಯನ್ನು ಮನೋಜ್ಞವಾಗಿ ಪ್ರದರ್ಶಿಸಿದ ಯುವಕರು ಭಕ್ತರಲ್ಲಿ ದೈವತ್ವದ ಮಹತ್ವ ಪರಿಚಯಿಸಿದರು.

ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಸಾವಿರಾರು ಭಕ್ತರು ಏಸುವಿನ ಜೀವನ ಚರಿತ್ರೆಯ ದೃಶ್ಯಾವಳಿಯನ್ನು ಕಂಡು ಪುನೀತರಾದರು.

ಎರಡು ಸಾವಿರ ವರ್ಷಗಳ ಹಿಂದೆ ಇದೇ ಶುಕ್ರವಾರದ ದಿನ ಏಸುಕ್ರಿಸ್ತ ಲೋಕ ಕಲ್ಯಾಣಕ್ಕಾಗಿ ಪ್ರಾಣ ತ್ಯಾಗ ಮಾಡಿ, ’ಇತರರಿಗೆ ಒಳಿತು ಮಾಡಲು ಕಷ್ಟ ಎದುರಿಸಲೂ ಸಿದ್ಧರಿರಬೇಕು’ ಎಂಬುದನ್ನು ಸಾರಿ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಅವರ ದೇಹತ್ಯಾಗದ ದಿನವನ್ನು ’ಶುಭ ಶುಕ್ರವಾರ’ ಎಂದು ಆಚರಿಸಲಾಗುತ್ತಿದೆ. ಮುಂದಿನ ಭಾನುವಾರ ಏಸುವಿನ ಪುನರುತ್ಥಾನ ದಿನವನ್ನಾಗಿ ’ಈಸ್ಟರ್’ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಫಾದರ್ ಆರೋಗ್ಯನಾಥನ್  ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.