ADVERTISEMENT

ಶ್ರೀನಿವಾಸ್ ಕಂಠಸಿರಿಯಲ್ಲಿ ಮಾರ್ದನಿಸಿದ ಗೀತೆಗಳು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2015, 19:30 IST
Last Updated 1 ಫೆಬ್ರುವರಿ 2015, 19:30 IST

ಶ್ರವಣ ಬೆಳಗೊಳ:  ಇಲ್ಲಿ ನಡೆಯುತ್ತಿರುವ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಭಾನುವಾರ ಕವಿ ಸಿದ್ದಲಿಂಗಯ್ಯ ಅವರ ಗೀತೆಗಳು ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅವರ ಕಂಠಸಿರಿಯಲ್ಲಿ ಮಾರ್ದನಿಸಿದವು.

ಕೇವಲ ದಲಿತ ಬಂಡಾಯದ ಗೀತೆಗಳೇ ಅಲ್ಲದೇ, ರಾಜಕೀಯ ಪ್ರೇಮಗೀತೆ, ಸಿನಿಮಾಗಾಗಿ ಬರೆದ ಪ್ರಣಯ ಗೀತೆಗಳೂ ಇದರಲ್ಲಿ ಸೇರಿ ಸಭಿಕರಿಗೆ ಭರಪೂರ ಮನರಂಜನೆ ನೀಡಿದವು.

ಈ ಹಾಡುಗಳು ಕೇವಲ ಮನರಂಜನೆ­ಗಾಗಿ ಅಲ್ಲ ಮನಸ್ಸಿನ ಆಲೋಚನೆಗಾಗಿ ಎಂದು ಹೇಳುವ ಮೂಲಕ ಪಿಚ್ಚಳ್ಳಿ ಅವರು, ಗಾಯನದ ಮುಖ್ಯ ಉದ್ದೇಶವನ್ನು ತಿಳಿಸಿದರು.

ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ... ಹಾಡಿನ ಗುಂಗು ಕೇಳುಗರನ್ನು ತನ್ಮಯಗೊಳಿಸಿತು. ಕೋಟಿ ಕೋಟಿ ಕಪ್ಪು ಜನರ ಮೊಟ್ಟಮೊದಲ ಮಾತೇ... ಎಂಬ ಚರಣವನ್ನು ಏರುಸ್ವರದಲ್ಲಿ ಹಾಡಿದ್ದು ಸಭಾಂಗಣದ ತುಂಬೆಲ್ಲಾ ಪ್ರತಿಧ್ವನಿಸಿತು.
ಬೆಳೆಯ ಕಾಣದೋದವನೇ ಎಂಬ ಸಾಲು ವಿಷಾದ ಮೂಡಿಸಿದರೆ ಮರುಕ್ಷಣವೇ ಹಾಡಿದ ಮಲಗಿದವರ ಕೂರಿಸಿದೇ ನಿಲ್ಲಿಸುವವರು ಯಾರು ಎಂಬ ಸಾಲುಗಳು ಚಿಂತನೆಗೆಡೆ ಮಾಡಿದವು.

ದಲಿತ ಬಂಡಾಯದ ಚಳವಳಿಯ ಸಮಯದಲ್ಲಿ ಮಾತ್ರವಲ್ಲ ಈಗಲೂ ಬಂಡಾಯ ಚಳವಳಿಗಳಲ್ಲಿ ಮುಖವಾಣಿ­ಯಾಗಿರುವ ‘ನನ್ನ ಜನಗಳು' ಪದ್ಯ­ವಂತೂ ಒಂದು ರೀತಿಯ ಸಂಚಲನಕ್ಕೆಡೆ ಮಾಡಿತು.

ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು... ಎಂಬ ಸಾಲುಗಳು ಕೇಳುಗ­ರನ್ನು ಸೂಜಿಗಲ್ಲಿನಂತೆ ಸೆಳೆಯಿತು.
ಡಿ.ವೈ. ರಾಘವ್ ಅವರ ಕಂಚಿನ ಕಂಠದಲ್ಲಿ ಮೂಡಿ ಬಂದ ‘ನೆನ್ನೆ ದಿನ ನನ್ನ ಜನ...' ಹಾಡಂತೂ ಕೇಳುಗರನ್ನು ವಿಸ್ಮಿತಗೊಳಿಸಿತು. ‘ದಿಕ್ಕಾರ ದಿಕ್ಕಾರ' ಎಂಬ ಘೋಷವಾಕ್ಯಗಳಂತೂ ಎಲ್ಲೆಡೆಯಿಂದಲೂ ಮೂಡಿಬಂತು.

ಇದಲ್ಲದೇ ಒಂದು ಕಾಲದಲ್ಲಿ ರಾಜಕೀಯ ಪ್ರೇಮಗೀತೆ ಎಂದೇ ಹೆಸರಾದ ‘ಉತ್ತರ ದಿಕ್ಕಿಗೆ ರಾಣಿಯೊಬ್ಬಳು ಇದ್ದಳು...’ ಗುಡಿಸಲಿನಲ್ಲಿ ಅರಳುವ ಗುಲಾಬಿ ನಕ್ಷತ್ರ ನನ್ನ ಕವನ'ಗಳು ಗಮನ ಸೆಳೆಯಿತು.

ಧರಣಿ ಮಂಡಳ ಮಧ್ಯದೊಳಗೆ ಸಿನಿಮಾಕ್ಕೆ ಬರೆದ ಗೆಳತಿ ಓ ಗೆಳತಿ ಅಪ್ಪಿಕೋ ಎನ್ನ ಅಪ್ಪಿಕೋ ಬಾಳೆಲ್ಲಾ ಎನ್ನ ತಬ್ಬಿಕೋ ಎಂಬ ಗೀತೆಯಂತೂ ಕೇಳುಗರನ್ನು ಮೋಡಿ ಮಾಡಿತು. ಇದು ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗಳಿಗೂ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.