ADVERTISEMENT

ಶ್ರೀರಂಗಪಟ್ಟಣ ಕ್ಷೇತ್ರ: ಯಾರ `ಕೈ' ಮೇಲು

ಎಸ್.ಎಂ.ಕೃಷ್ಣ, ಅಂಬರೀಷ್ ಜಿದ್ದಾಜಿದ್ದಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST
ಶ್ರೀರಂಗಪಟ್ಟಣ ಕ್ಷೇತ್ರ: ಯಾರ `ಕೈ' ಮೇಲು
ಶ್ರೀರಂಗಪಟ್ಟಣ ಕ್ಷೇತ್ರ: ಯಾರ `ಕೈ' ಮೇಲು   

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು, ತಮ್ಮ ಹಿಂಬಾಲಕರಿಗೇ ಕೊಡಿಸುವುದು ರಾಜ್ಯದ ಇಬ್ಬರು ಕಾಂಗ್ರೆಸ್ ಘಟಾನುಘಟಿ ನಾಯಕರ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇಬ್ಬರೂ ನಾಯಕರು ದೆಹಲಿಗೆ ತೆರಳಿ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಲಾಬಿ ನಡೆಸಿದ್ದಾರೆ.

ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಅವರ ಪರ ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ವಕಾಲತ್ತು ವಹಿಸಿದ್ದರೆ, ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್. ಲಿಂಗರಾಜು ಅವರ ಪರವಾಗಿ ಕೇಂದ್ರದ ಮಾಜಿ ಸಚಿವ ಅಂಬರೀಷ್ ಕೆಲಸ ಮಾಡುತ್ತಿದ್ದಾರೆ.

ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಅಂಬರೀಷ್ ಅವರ ಹೆಸರನ್ನು ಘೋಷಿಸಿ ನಾಲ್ಕಾರು ದಿನಗಳೇ ಕಳೆದಿವೆ. ಆದರೂ ಕ್ಷೇತ್ರದಲ್ಲಿ ಪ್ರಚಾರಕ್ಕೂ ಬಾರದೆ, ಶ್ರೀರಂಗಪಟ್ಟಣದಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ತೀವ್ರ ಯತ್ನ ನಡೆಸಿದ್ದಾರೆ.

2008ರಲ್ಲಿ ಶ್ರೀರಂಗಪಟ್ಟಣದಿಂದ ಸ್ಪರ್ಧಿಸಿದ್ದ ಅಂಬರೀಷ್ ಅವರು, ಈ ಬಾರಿ ಮಂಡ್ಯದಿಂದ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆಯೇ, ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಅವರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಕಾಂಗ್ರೆಸ್ಸಿಗರ ಲೆಕ್ಕಾಚಾರವಾಗಿತ್ತು. ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ  ಪ್ರಕಟವಾಗಿದ್ದರೂ ಶ್ರೀರಂಗಪಟ್ಟಣದ ಅಭ್ಯರ್ಥಿ ಹೆಸರು ಮಾತ್ರ ಪ್ರಕಟವಾಗಿಲ್ಲ.

2004ರಲ್ಲಿ ಲೋಕಸಭೆ ಹಾಗೂ ವಿಧಾನಸಭೆಯ ಚುನಾವಣೆಗಳೆರಡೂ ಏಕಕಾಲಕ್ಕೆ ನಡೆದವು. ಆಗ ರವೀಂದ್ರ ಶ್ರೀಕಂಠಯ್ಯ ಅವರ ತಾಯಿ ಪಾರ್ವತಮ್ಮ ಶ್ರೀಕಂಠಯ್ಯ ವಿಧಾನಸಭೆಗೆ ಹಾಗೂ ಅಂಬರೀಷ್ ಅವರು ಲೋಕಸಭೆಗೆ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಪಾರ್ವತಮ್ಮ ಶ್ರೀಕಂಠಯ್ಯ ಅವರು ಮೂರನೇ ಸ್ಥಾನ ಪಡೆದಿದ್ದರು. ಆದರೆ ಅಂಬರೀಷ್ ಲೋಕಸಭೆಗೆ ಆಯ್ಕೆಯಾದರು. ಅದರಲ್ಲೂ ಶ್ರೀರಂಗಪಟ್ಟಣ ವಿಧಾನಸಭೆಯಲ್ಲಿ ಅವರಿಗೆ ಲೀಡ್ ಸಿಕ್ಕಿತ್ತು. ಇದು ಇಬ್ಬರ ನಡುವೆ ಸಂಶಯ ಹುಟ್ಟಲು ಕಾರಣವಾಯಿತು.

2008ರ ವಿಧಾನಸಭೆ ಚುನಾವಣೆ ಮುನ್ನ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ರವೀಂದ್ರ ಶ್ರೀಕಂಠಯ್ಯ ಅವರ ಹೆಸರು ಪ್ರಕಟವಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅಂಬರೀಷ್ ಕಣಕ್ಕೆ ಇಳಿದರು. ಈ ಘಟನೆ ಇಬ್ಬರ ನಡುವಿನ ಮನಸ್ತಾಪ ಹೆಮ್ಮರವಾಗಲು ಕಾರಣವಾಯಿತು. ಆನಂತರ ಸ್ಥಳೀಯ ಚುನಾವಣೆಗಳಲ್ಲಿ ಎರಡೂ ಬಣದ ಅಭ್ಯರ್ಥಿಗಳು ಪರಸ್ಪರ ವಿರುದ್ಧ ಸ್ಪರ್ಧಿಸಿ ಕಾದಾಟಕ್ಕೆ ಇಳಿದಿದ್ದರು. ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಅಂಬರೀಷ್ ಹಾಗೂ ರವೀಂದ್ರ ಶ್ರೀಕಂಠಯ್ಯ ಅವರಿಗೆ ತಲಾ 23 ಬಿ ಫಾರಂ ನೀಡಿದ್ದು, ಅವರ ನಡುವೆ ಇರುವ ಜಿದ್ದಾಜಿದ್ದಿಗೆ  ಉದಾಹರಣೆಯಾಗಿದೆ.

ತಮ್ಮ ಬೆಂಬಲಿಗರ ಮೂಲಕ ಜಿಲ್ಲೆಯಲ್ಲಿ ಮೇಲುಗೈ ಸಾಧಿಸಲು ಕೇಂದ್ರದ ಇಬ್ಬರೂ ಮಾಜಿ ಸಚಿವರು ತಮ್ಮವರಿಗೇ ಟಿಕೆಟ್ ಕೊಡಿಸುವ ಯತ್ನ ಮುಂದುವರಿಸುತ್ತಲೇ ಬಂದಿದ್ದಾರೆ. ಶ್ರೀರಂಗಪಟ್ಟಣದಲ್ಲಿಯೂ ಅದೇ ಕಾರ್ಯತಂತ್ರ ನಡೆಸಿದ್ದಾರೆ. ಯಾವ ನಾಯಕರ `ಕೈ' ಮೇಲಾಗುವುದೋ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.