ಬೆಂಗಳೂರು: ಲೋಕಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿರುವುದರಿಂದ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರನ್ನು ಸೋಮವಾರ ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವೊಲಿಕೆ ಯತ್ನ ಮಾಡಿದರು. ಆದರೆ, ಗುಟ್ಟು ಬಿಟ್ಟುಕೊಡದ ಷರೀಫ್ ಮೆಕ್ಕಾ ಯಾತ್ರೆಯ ಬಳಿಕವೇ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
ವಾರ್ತಾ ಸಚಿವ ಆರ್.ರೋಷನ್ ಬೇಗ್ ಅವರೊಂದಿಗೆ ಇಲ್ಲಿನ ಕೋಲ್ಸ್ ಪಾರ್ಕ್‌ನಲ್ಲಿರುವ ಷರೀಫ್ ನಿವಾಸಕ್ಕೆ ಸಂಜೆ ಭೇಟಿ ನೀಡಿದ ಸಿದ್ದರಾಮಯ್ಯ, ಮಾತುಕತೆ ನಡೆಸಿದರು. ಲೋಕಸಭಾ ಚುನಾವಣೆಗೆ ಟಿಕೆಟ್ ನೀಡದಿರುವ ಪಕ್ಷದ ನಿರ್ಧಾರವನ್ನು ಕಡೆಗಣನೆ ಎಂಬುದಾಗಿ ಭಾವಿಸದಂತೆ ಸಮಾಧಾನಪಡಿಸಲು ಪ್ರಯತ್ನಿಸಿದರು. ಪಕ್ಷ ತೊರೆಯುವ ನಿರ್ಧಾರ ಕೈಗೊಳ್ಳದಂತೆಯೂ ಮನವಿ ಮಾಡಿದರು.
ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸೋಮವಾರ ಬೆಳಿಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆ ನಡೆಸಿದ ಷರೀಫ್, ಮುಂದಿನ ರಾಜಕೀಯ ನಡೆ ಕುರಿತು ಸಮಾಲೋಚಿಸಿದರು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಎದುರಿಸುವ ಆಕಾಂಕ್ಷಿಯಾಗಿದ್ದ ತಮಗೆ ಪಕ್ಷದ ಮುಖಂಡರು ಟಿಕೆಟ್ ನಿರಾಕರಿಸಿದ್ದರಿಂದ ಬೇಸರವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಜೆಡಿಎಸ್ ಪಕ್ಷದಿಂದ ಆಹ್ವಾನ ಬಂದಿರುವ ವಿಚಾರವನ್ನೂ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಮುಂದಿನ ರಾಜಕೀಯ ನಡೆಯ ವಿಷಯದಲ್ಲಿ ದುಡುಕಿನ ನಿರ್ಧಾರವನ್ನು ಕೈಗೊಳ್ಳದಂತೆ ಧಾರ್ಮಿಕ ಮುಖಂಡರು ಷರೀಫ್ ಅವರಿಗೆ ಸಲಹೆ ಮಾಡಿದ್ದಾರೆ. ಕಾಂಗ್ರೆಸ್ ತೊರೆಯುವ ವಿಷಯದಲ್ಲಿ ಪುನಃ ಪರಿಶೀಲನೆ ನಡೆಸಿ ನಿರ್ಣಯಕ್ಕೆ ಬರುವಂತೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಷರೀಫ್, ‘ಜಾತ್ಯತೀತ ಶಕ್ತಿಗಳನ್ನು ಬಲಪಡಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ನಾನು ಮೆಕ್ಕಾ ಯಾತ್ರೆ ಬಳಿಕವೇ ಮುಂದಿನ ರಾಜಕೀಯ ನಿರ್ಧಾರವನ್ನು ಪ್ರಕಟಿಸುತ್ತೇನೆ’ ಎಂದರು.
ಮುಖ್ಯಮಂತ್ರಿಯವರ ಭೇಟಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿಯವರ ಬಂದು, ಹೋದರು. ಅವರ ಜೊತೆ ನಡೆದ ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಲು ನಾನು ಇಚ್ಛಿಸುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.