ADVERTISEMENT

ಸಂಡೂರು ಬಳಿ ಗ್ರಾಮಸ್ಥರಿಂದ ಅದಿರು ಲಾರಿಗಳಿಗೆ ತಡೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಬಳ್ಳಾರಿ:  ಅಕ್ರಮವಾಗಿ ಅದಿರು ಸಾಗಿಸುತ್ತಿರುವ ಪ್ರಕರಣವೊಂದನ್ನು ಜಿಲ್ಲೆಯ ಸಂಡೂರು ತಾಲ್ಲೂಕಿನ ನವಲಹಟ್ಟಿ ಗ್ರಾಮದ ಜನರೇ ಗುರುವಾರ ಮಧ್ಯರಾತ್ರಿ ಪತ್ತೆ ಮಾಡಿ ಪೊಲೀಸರಿಗೆ ತಿಳಿಸಿದ ಪ್ರಕರಣ ನಡೆದಿದೆ.

ಈ- ಟೆಂಡರ್ ಮೂಲಕ ಖರೀದಿಸಲಾದ ಅದಿರನ್ನು ಸಾಗಿಸಲು ಅನುಮತಿ ಪಡೆದಿರುವ ಸಂಸ್ಥೆಯೊಂದು, ನಿಗದಿತ ಸ್ಥಳದಿಂದ ಅದಿರು ಸಾಗಿಸದೆ, ನವಲಹಟ್ಟಿ ಗ್ರಾಮದ ಅನತಿ ದೂರದಿಂದ ಅದಿರು ತುಂಬಿಕೊಂಡು ಹೋಗುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾಮಸ್ಥರು ಲಾರಿಗಳನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿರುವ ರಾಯಲಸೀಮಾ ಗ್ರೀನ್ ಸ್ಟೀಲ್ಸ್ ಮೆದು ಕಬ್ಬಿಣ ಘಟಕಕ್ಕೆ ಅದಿರನ್ನು ಮಾರಾಟ ಮಾಡಲೆಂದೇ ಯೆಸ್ಸಾರ್ ಟ್ರೇಡಿಂಗ್ ಕಾಪೋರೇಷನ್ ಸಂಸ್ಥೆ ಸಂಡೂರು ತಾಲ್ಲೂಕಿನ ಕೃಷ್ಣ ನಗರದಿಂದ ಅದಿರು ಸಾಗಿಸುವ ಪರ್ಮಿಟ್ ಪಡೆದಿದೆ. ಆದರೆ, ಅಲ್ಲಿಂದ ಅದಿರು ಸಾಗಿಸದೆ, ನವಲಹಟ್ಟಿ ಬಳಿ ಇರುವ ಸ್ಟಾಕ್ ಯಾರ್ಡ್‌ನಿಂದ 90ಕ್ಕೂ ಅಧಿಕ ಲಾರಿಗಳಲ್ಲಿ ಅದಿರು ಸಾಗಿಸಲಾಗಿದೆ ಎಂದು ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರರಿಗೆ ತಿಳಿಸಿದರು.

ಪರ್ಮಿಟ್ ಪಡೆದಿರುವುದೇ ಬೇರೆ ಸ್ಥಳದಿಂದ, ಅದಿರು ತುಂಬಿಕೊಂಡು ಹೊರಟಿರುವುದೇ ಬೇರೆಡೆಯಿಂದ ಎಂಬ ವಿಷಯ ತಿಳಿದುಬಂದ ಕೂಡಲೇ ಲಾರಿ ತಡೆದು ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಗ್ರಾಮಸ್ಥರು ಹೇಳಿದರು.

ನಿರಂತರ ನಡೆಯುತ್ತಿದ್ದ ಅಕ್ರಮ ಅದಿರು ಸಾಗಣೆ ತಡೆಯುವ ಹಿನ್ನೆಲೆಯಲ್ಲಿ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅದಿರು ಸಾಗಣೆ ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದರೂ, ಈ ರೀತಿ ಅಕ್ರಮವಾಗಿ ಅದಿರು ಸಾಗಣೆ ನಡೆಯುತ್ತಿದೆ. ಇದರಲ್ಲಿ ಹಿರಿಯ ಅಧಿಕಾರಿಯೊಬ್ಬರ ಕೈವಾಡವಿದೆ ಎಂದು ನವಲಹಟ್ಟಿ ಗ್ರಾಮದ ಆಂಜಿನೇಯ ಆರೋಪಿಸಿದರು.

ಸುಪ್ರೀಂ ಕೋರ್ಟ್ ನಿರ್ದೇಶಿತ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ), ಸಿಬಿಐ, ಕೇಂದ್ರದ ಪರಸರ ಅಧ್ಯಯನ ತಂಡ, ಲೋಕಾಯುಕ್ತ ಅಧಿಕಾರಿಗಳು ಜಿಲ್ಲೆಗೆ ಮೇಲಿಂದಮೇಲೆ ಆಗಮಿಸಿ, ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಅದಿರು ಸಾಗಣೆ ತಡೆಯಲು ಶ್ರಮಿಸುತ್ತಿದ್ದರೂ, ಅದಿರಿನ ಕೊರತೆಯಿಂದ ಉಕ್ಕು ಕಾರ್ಖಾನೆಗಳು ಸಂಕಷ್ಟ ಎದುರಿಸುತ್ತಿವೆ ಎಂದು ತಿಳಿಸಿ, ಅಕ್ರಮವಾಗಿ ಅದಿರು ಸಾಗಣೆ ನಡೆಸುತ್ತಿರುವುದು ಅಕ್ಷಮ್ಯ ಎಂದೂ ಅವರು ಹೇಳಿದರು.

ಗ್ರಾಮಸ್ಥರು ಲಾರಿಗಳನ್ನು ತಡೆದ ವೇಳೆ ಸ್ಥಳಕ್ಕೆ ಆಗಮಿಸಿದ ಸಂಡೂರಿನ ಸಿಪಿಐ ಅಶೋಕ್‌ಕುಮಾರ್, ಅನುಮತಿ ಪಡೆದ ಸ್ಥಳ ಬಿಟ್ಟು ಬೇರೆಡೆ ಅದಿರನ್ನು ತುಂಬಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜತೆ ಸಮಾಲೋಚನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಶಕ್ಕೆ ಲಾರಿಗಳನ್ನು ಒಪ್ಪಿಸಲಾಗಿದೆ. ಜಿಲ್ಲೆಯ ವಿವಿಧೆಡೆ ರೈತರ ಜಮೀನಿನಲ್ಲಿ ಡಿಗ್ಗಿಂಗ್ ಮೂಲಕ ಸಂಗ್ರಹಿಸಲಾದ ಅದಿರನ್ನು ಈ- ಟೆಂಡರ್ ಮೂಲಕ ಮಾರಾಟ ಮಾಡಿ ಸಾಗಣೆ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದರಿಂದ ಟೆಂಡರ್ ಮೂಲಕ ಅದಿರು ಮಾರಾಟ ಮಾಡಿ,  ಅದಿರಿನ ಸಾಗಣೆಗೆ ಎರಡು ದಿನಗಳ ಹಿಂದಷ್ಟೇ ಅನುಮತಿ ನೀಡಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.