ADVERTISEMENT

ಸಂತ್ರಸ್ತರಿಗೆ ದೇಣಿಗೆ: ಸಚಿವರ ಮನವಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ಚಾಮರಾಜನಗರ: `ಮಹಾ ಮಳೆಯಿಂದ ತತ್ತರಿಸಿರುವ ಉತ್ತರಾಖಂಡ ರಾಜ್ಯದ ಸಂತ್ರಸ್ತರಿಗೆ ಸ್ಪಂದಿಸಲು ಎಲ್ಲ ಸಹಕಾರ ಸಂಘಗಳು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ ನೀಡಬೇಕು' ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಕೋರಿದರು.

`ಉತ್ತರಾಖಂಡದಲ್ಲಿ ಮಳೆ ಹಾಗೂ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಕೇಂದ್ರ ಸರ್ಕಾರ ಹಾಗೂ ಉತ್ತರಾಖಂಡ ಸರ್ಕಾರ ನೆರವಿನ ಹಸ್ತ ಚಾಚಿವೆ. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳು ನೆರವು ನೀಡುವ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ' ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`2009ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಂಭವಿಸಿದ ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಸಹಕಾರ ಸಂಘಗಳಿಂದ ದೇಣಿಗೆ ಸಂಗ್ರಹಿಸಿ `ಮುಖ್ಯಮಂತ್ರಿ ಪರಿಹಾರ ನಿಧಿ'ಗೆ ನೀಡಲಾಗಿತ್ತು. ಇದೇ ಮಾದರಿಯಲ್ಲಿ ಉತ್ತರಾಖಂಡದಲ್ಲಿ ಪ್ರಕೃತಿ ವಿಕೋಪದಿಂದ ಆಗಿರುವ ನಷ್ಟ ಭರಿಸಲು ಉದಾರವಾಗಿ ದೇಣಿಗೆ ನೀಡಬೇಕು' ಎಂದರು.

`ವಿವಿಧ ಸಹಕಾರ ಸಂಘಗಳು  ಜಿಲ್ಲಾ ಮಟ್ಟದ ಸಂಸ್ಥೆಗಳ ಮೂಲಕ ದೇಣಿಗೆ ನೀಡಬೇಕು. ಈ ದೇಣಿಗೆಯನ್ನು ಅಪೆಕ್ಸ್ ಬ್ಯಾಂಕಿನಲ್ಲಿ ಕ್ರೋಡೀಕರಿಸಲಾಗುವುದು. ಆಗಸ್ಟ್ 15ರ ಒಳಗೆ ಪ್ರಧಾನಿಗೆ ಕಳುಹಿಸಲು ನಿರ್ಧರಿಸಲಾಗಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಜುಲೈ 10ರ ಒಳಗೆ ಪಾದಯಾತ್ರೆ ಮೂಲಕ ದೇಣಿಗೆ ಸಂಗ್ರಹಿಸಲಾಗುವುದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.