ADVERTISEMENT

‘ಸಂವಿಧಾನದ ಆಶಯಕ್ಕೆ ವಿರುದ್ಧದ ಆಚರಣೆ ಸಲ್ಲದು’

ಮಳೆಗಾಗಿ ನಡೆದ ಪರ್ಜನ್ಯ ಹೋಮ ಮತ್ತು ಪೂಜೆ ವಿವಾದದ ಬಗ್ಗೆ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ಪರ್ಜನ್ಯ ಹೋಮ ಮತ್ತು ಪೂಜೆ ಕುರಿತು ವಿಧಾನಸಭೆಯಲ್ಲಿ ನಡೆದ ಸ್ವಾರಸ್ಯಕರ ಚರ್ಚೆಯಲ್ಲಿ ತೊಡಗಿದ್ದ ಜಗದೀಶ ಶೆಟ್ಟರ್‌, ಕೆ.ಬಿ.ಕೋಳಿವಾಡ, ಎಂ.ಬಿ.ಪಾಟೀಲ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಕೆ.ಆರ್‌.ರಮೇಶ್‌ ಕುಮಾರ್‌    –ಪ್ರಜಾವಾಣಿ ಚಿತ್ರ
ಪರ್ಜನ್ಯ ಹೋಮ ಮತ್ತು ಪೂಜೆ ಕುರಿತು ವಿಧಾನಸಭೆಯಲ್ಲಿ ನಡೆದ ಸ್ವಾರಸ್ಯಕರ ಚರ್ಚೆಯಲ್ಲಿ ತೊಡಗಿದ್ದ ಜಗದೀಶ ಶೆಟ್ಟರ್‌, ಕೆ.ಬಿ.ಕೋಳಿವಾಡ, ಎಂ.ಬಿ.ಪಾಟೀಲ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಕೆ.ಆರ್‌.ರಮೇಶ್‌ ಕುಮಾರ್‌ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಕ್ತಿ ಬೇರೆ, ಪೂಜೆ ಬೇರೆ. ಭಕ್ತಿಗೆ ಶುದ್ಧ ಮನಸ್ಸು ಇದ್ದರೆ ಸಾಕು. ಪೂಜೆಗೆ ಹಣ್ಣು–ಕಾಯಿ, ಕರ್ಪೂರದಂತಹ ಸಾಮಗ್ರಿ ಬೇಕು’.
ವಿಧಾನಸಭೆಯಲ್ಲಿ ಬುಧವಾರ ಮೌಢ್ಯ, ನಂಬಿಕೆ, ಪೂಜೆ, ಭಕ್ತಿಯ ಬಗ್ಗೆ ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ಕುಮಾರ್‌  ವ್ಯಾಖ್ಯಾನ ಮಾಡಿದ್ದು ಹೀಗೆ.

ಮಳೆಗಾಗಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರು ಪರ್ಜನ್ಯ  ಹೋಮ ಮತ್ತು  ಪೂಜೆ ನಡೆಸಿದ ವಿವಾದದ ಬಗ್ಗೆ ವಿಧಾನಸಭೆಯಲ್ಲಿ  ಪಾಟೀಲ ಸಮಾಜಾಯಿಷಿ ನೀಡುತ್ತಿದ್ದರು.    ಆಗ ಮಧ್ಯ ಪ್ರವೇಶಿಸಿದ ರಮೇಶ್‌ಕುಮಾರ್‌ ಮಾತುಗಳು ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿತು.

‘ಇತ್ತೀಚಿನ ದಿನಗಳಲ್ಲಿ ಶುದ್ಧ ಮನಸ್ಸಿನ ಭಕ್ತಿಗಿಂತ, ಪೂಜೆ ಮಾಡುವವರೇ ಹೆಚ್ಚಾಗಿದ್ದಾರೆ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಂಬಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ಯಾವುದೇ ಅಡ್ಡಿ ಇಲ್ಲ. ಅದಕ್ಕಾಗಿಯೇ ಧಾರ್ಮಿಕ ದತ್ತಿ ಇಲಾಖೆ ಇರುವುದು’ ಎಂದರು.
‘ಆದರೆ, ಸರ್ಕಾರದ ಹಣ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಕಾರ್ಯಗಳಿಗೆ ಬಳಕೆ ಮಾಡಬೇಕೆ.  ಮಂತ್ರಿಗಳು ತಮ್ಮ ಕೊಠಡಿಗಳನ್ನು ಪ್ರವೇಶ ಮಾಡುವಾಗ ಪೂಜೆ ಮಾಡಿಸುತ್ತಾರೆ. ದೇವರ ಪಟಗಳನ್ನು ಇಟ್ಟುಕೊಳ್ಳುತ್ತಾರೆ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು. ನಾವು ಬುದ್ಧಿಪೂರ್ವಕವಾಗಿ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದೇವೆ’ ಎಂದು ರಮೇಶ್‌ ಕುಮಾರ್‌ ಮಾತಿನ ಚಾಟಿ ಬೀಸಿದರು.

ADVERTISEMENT

‘ದೇವರು, ಪೂಜೆ, ಹೋಮವನ್ನು ಕೆಲವರು ಜಹಗೀರು ಪಡೆದಿದ್ದಾರೆ. ಇದರಿಂದ ದೇಶದಲ್ಲಿ ಸೈದ್ಧಾಂತಿಕ ಸಂಘರ್ಷ ನಡೆಯುತ್ತಿದೆ. ಇದನ್ನು ಒಪ್ಪುವವರು ಒಂದು ಕಡೆ. ವಿರೋಧಿಸುವವರು ಇನ್ನೊಂದು ಕಡೆ. ಯಾವುದನ್ನು ಒಪ್ಪಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎನ್ನುವುದನ್ನು ಜನರಿಗೇ ಬಿಡೋಣ’ ಎಂದು ಮಾರ್ಮಿಕವಾಗಿ ಬಿಜೆಪಿಗೆ ಟಾಂಗ್‌ ನೀಡಿದರು.

‘ನಾನೂ ದೇವಸ್ಥಾನಕ್ಕೆ ಹೋಗುತ್ತೇನೆ. ಪೂಜೆ ಮಾಡಿದರೆ ಅಪರಾಧ ಅಲ್ಲ. ಅದು ನಂಬಿಕೆ ವಿಚಾರ. ಈ ಬಗ್ಗೆ ಸಚಿವರು ಉದ್ವೇಗಕ್ಕೆ ಒಳಗಾಗಬೇಕಿಲ್ಲ. ಆಚರಣೆ ಮಾಡುವಾಗ ಸಂವಿಧಾನದ ಮೂಲಭೂತ ಆಶಯಗಳಿಗೆ ಧಕ್ಕೆ ಆಗಬಾರದು’ ಎಂದು ರಮೇಶ್‌ಕುಮಾರ್‌  ಪಾಟೀಲರ ಬೆಂಬಲಕ್ಕೆ  ನಿಂತರು.

‘ಹಾಗೆಯೇ  ನಮ್ಮ ನಂಬಿಕೆಗಳನ್ನು ಇತರರ ಮೇಲೆ ಹೇರಲು ಹೋಗಬಾರದು. ಮುಸ್ಲಿಮರು ರಮ್ಜಾನ್‌ನಲ್ಲಿ ಉಪವಾಸ ಮಾಡುತ್ತಾರೆ. ಹಾಗೆಂದು ಅವರು ಬೇರೆಯವರ ಮೇಲೆ ಒತ್ತಡ ಹೇರಲು ಆಗಲ್ಲ. ನಾವು ಏಕಾದಶಿ ಮಾಡುತ್ತೇವೆ. ಅದನ್ನು ಬೇರೆಯವರ ಮೇಲೆ  ಹೇರಬಾರದು’ ಎಂದು ಕಿವಿಮಾತು ಹೇಳಿದರು.

ರ‍್ಯಾಡೊ, ಫಿಲಿಪ್ಸ್‌...
ರ‍್ಯಾಡೊ– ರೆಡ್ಡಿ ಲಿಂಗಾಯಿತ, ಫಿಲಿಪ್ಸ್‌ – ಪಂಚಮ ಸಾಲಿ, ಬುಷ್‌– ಬಣಜಿಗ ಮತ್ತು ಸೋನಿ ಎಂದರೆ ಸಾದರ ಲಿಂಗಾಯಿತರು... ಈ ರೀತಿ  ಅಡ್ಡ ಹೆಸರಿನಲ್ಲಿ  ಕರೆಯುವುದನ್ನು ಹಿಂದೊಮ್ಮೆ ಸಿದ್ದನಗೌಡರ ಸದನದಲ್ಲಿ ಹೇಳಿದ್ದರು. ಈಗ ದಲಿತರಲ್ಲೂ ರೈಟ್‌, ಲೆಫ್ಟ್‌, ಮಿಡ್ಲ್‌, ನಾರ್ತ್‌ ಈಸ್ಟ್‌ ಎಂದೆಲ್ಲ ಇದೆ. ಬ್ರಾಹ್ಮಣರಲ್ಲಿ ನಾಮದ ಜಗಳ ನ್ಯಾಯಾಲಯದ ಮೆಟ್ಟಿಲು ಏರಿತ್ತು. ನಾಮವೇ ಅಪಾಯಕಾರಿ’ ಎಂದು ರಮೇಶ್‌ ಕುಮಾರ್‌ ನವಿರಾದ ಹಾಸ್ಯದಲ್ಲಿ ವಿವರಿಸಿದರು.

ಹೋಮ ಮಾಡಿದವನು ಲಿಂಗಾಯಿತನಲ್ಲ
ಬಿಜೆಪಿಯ ಗೋವಿಂದಕಾರಜೋಳ ಅವರು, ಬಸವಣ್ಣ ಅವರ ವಚನವನ್ನು ಉಲ್ಲೇಖಿಸಿ, ‘ಹೋಮ ಮಾಡುವವನು ಲಿಂಗಾಯಿತನಲ್ಲ’ ಎಂದು ಹೇಳಿದರು.

‘ಹಾಗಿದ್ದರೆ ಯಾರೂ ಲಿಂಗಾಯಿತರಲ್ಲ’ ಎಂದು ಉಳಿದ ಸದಸ್ಯರು ಎಂ.ಬಿ. ಪಾಟೀಲ ಮತ್ತು ಶೆಟ್ಟರ್‌ ಅವರ ಕಡೆ ನೋಡಿದಾಗ, ಸದನದಲ್ಲಿ ನಗುವಿನ ಅಲೆ ಉಕ್ಕಿತು.

‘ನಾನು ಲಿಂಗ ಕಟ್ಟಿದ್ದೇನೆ’: ‘ಎಸ್‌.ಆರ್‌.ಬೊಮ್ಮಾಯಿಯವರು ಎಂ.ಎನ್‌.ರಾಯ್‌  ಅವರ ಸಿದ್ಧಾಂತದ ಅನುಯಾಯಿಯಾಗಿದ್ದರು. ಅವರ ಮಗ ಬಸವರಾಜ ಬೊಮ್ಮಾಯಿ ಅವರು ಸನಾತನವಾದಿ ಪಕ್ಷಕ್ಕೆ ಸೇರಿದ್ದಾರೆ’ ಎಂದು ರಮೇಶ್‌ ಕುಮಾರ್‌  ಲೇವಡಿ ಮಾಡಿದರು.
‘ನಮ್ಮ ತಂದೆ ಲಿಂಗಧಾರಣೆ ಮಾಡಿರಲಿಲ್ಲ. ಆದರೆ, ನಾನು ನನ್ನ ತಾಯಿಯ ಸಂಸ್ಕಾರಗಳನ್ನು ಅಳವಡಿಸಿಕೊಂಡು ಬೆಳೆದವನು. ಲಿಂಗಧಾರಣೆ ಮಾಡಿದ್ದೇನೆ’ ಎಂದು ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟರು.

ಪರ್ಜನ್ಯ ಹೋಮ ಮಾಡಿಲ್ಲ– ಪಾಟೀಲ

‘ನಾನು ಪರ್ಜನ್ಯ ಹೋಮ ನಡೆಸಿಲ್ಲ. ಪರ್ಜನ್ಯ ಜಪ ಮಾಡಿಸಿದ್ದೇನೆ. ನನ್ನ ಸ್ವಂತ ಖರ್ಚಿನಿಂದ ಇದನ್ನು ನಡೆಸಿದ್ದೇನೆ’ ಎಂದು ಇದಕ್ಕೂ ಮೊದಲು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು  ಸಮರ್ಥಿಸಿಕೊಂಡರು.

ಈ ಸಂಬಂಧ ನಾಲ್ಕು ಪುಟಗಳ ಲಿಖಿತ ಹೇಳಿಕೆಯನ್ನು ಸಚಿವರು ಓದಿದರು. ಅನಂತರ ಭಾವೋದ್ವೇಗದಿಂದ ಬಿಜೆಪಿ ಸದಸ್ಯರ ಮೇಲೆ ಹರಿಹಾಯ್ದರು.

‘ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದಾಗ ಪ್ರಮುಖ ದೇವಾಲಯಗಳಲ್ಲಿ ವರುಣಮಂತ್ರ  ಪೂರ್ವಕ ಜಲಾಭಿಷೇಕ ನಡೆಸಲು ಆದೇಶ ನೀಡಿದ್ದರು. ಇದಕ್ಕೆ ₹ 17 ಕೋಟಿ ಖರ್ಚಾಗಿತ್ತು. ಶೆಟ್ಟರ್ ಈ ಬಗ್ಗೆ ಉತ್ತರ ನೀಡಬೇಕು’ ಎಂದು ಪಾಟೀಲ ಆಗ್ರಹಿಸಿದರು.

‘ನಾನು ಕಲ್ಲು ದೇವರಿಗೆ ಪೂಜೆ ಮಾಡಿಸಿಲ್ಲ. ಬದಲಿಗೆ ದೇವತಾಸ್ವರೂಪಿ ಆಗಿರುವ ಜೀವನದಿಗಳಿಗೆ ಪೂಜೆ ಮಾಡಿದ್ದು. ಕೃಷ್ಣಾ ಮತ್ತು ಕಾವೇರಿಗೆ ಪೂಜೆ ಮಾಡುವುದು ನಮ್ಮ ಸಂಸ್ಕೃತಿ. ತಾಯಿಯ ಪೂಜೆ ಮಾಡುವುದು ಮೌಢ್ಯ, ತಪ್ಪು ಎನ್ನುವುದಾದರೆ, ಇಂತಹ ಪೂಜೆಯನ್ನು ಲಕ್ಷ ಬಾರಿ ಮಾಡುತ್ತೇನೆ’ ಎಂದೂ ಸಚಿವರು ಗುಡುಗಿದರು.

ಬಿಜೆಪಿ ಸರ್ಕಾರ  ವರುಣಮಂತ್ರ  ಪೂರ್ವಕ ಜಲಾಭಿಷೇಕ ನಡೆಸುವ ಸಂಬಂಧ ಆದೇಶದ ಪ್ರತಿಯನ್ನು ಸಚಿವರು ಪದೇ ಪದೇ ಪ್ರದರ್ಶಿಸಿದರು.

ಪಾಟೀಲರ ನೆರವಿಗೆ ರಮೇಶ್‌ ಕುಮಾರ್‌ ಸೇರಿದಂತೆ ಬೆರಳೆಣಿಕೆ ಸದಸ್ಯರು ಮಾತ್ರ ಬಂದರು. ಅನೇಕ ಹಿರಿಯ ಸಚಿವರು ಸದನದಲ್ಲಿದ್ದರೂ ಮೌನಕ್ಕೆ ಶರಣಾಗಿದ್ದರು.

ವಿರೋಧಾಭಾಸದ ನಡವಳಿಕೆ :  ‘ಒಂದು ಕಡೆ ಮೌಢ್ಯ ವಿರೋಧಿ ಮಸೂದೆ ತರುತ್ತೇವೆ ಎನ್ನುವ ಸರ್ಕಾರ. ಮತ್ತೊಂದು ಕಡೆ ಪರ್ಜನ್ಯ ಹೋಮ ಮಾಡಿಸಿ ಮಳೆ ತರಿಸಲು ಮುಂದಾಗಿರುವ ವಿರೋಧಾಭಾಸದ ನಡೆಯನ್ನು ನಾವು ಖಂಡಿಸಿದ್ದು’ ಎಂದು ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದರು.

‘ನಾನು ಎಲ್ಲೂ ಹೋಮ– ಹವನ ಮಾಡಿಸಿಲ್ಲ. ನಿಮ್ಮ ಕಾಲದಲ್ಲಿ ಮಾಡಿಸಿದ್ದೀರಿ’ ಎಂದು ಪಾಟೀಲ ಆವೇಶದಿಂದ ಹೇಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

* ಇಸ್ರೊದವರು ತಿರುಪತಿಯಲ್ಲಿ ರಾಕೆಟ್‌ ಪ್ರತಿಕೃತಿ ಇಟ್ಟು ಹೋಮ ಮಾಡಿದ್ದಾರೆ. ಕೇಂದ್ರದವರ ರಾಜೀನಾಮೆ ಕೇಳ್ತಿರಾ
–ಎಂ.ಬಿ.ಪಾಟೀಲ, ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.