ADVERTISEMENT

ಸಕಾರಾತ್ಮಕವಿದ್ದರೂ ಕಾಣದ ದೂರದೃಷ್ಟಿ...

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ಕೇಂದ್ರ ಸರ್ಕಾರದ ಬಜೆಟ್ ಬಹುತೇಕ ಸಮತೋಲನದಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಶೀಘ್ರದಲ್ಲಿಯೇ ಕೆಲ ರಾಜ್ಯಗಳ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಗಮನದಲ್ಲಿ ಇಟ್ಟುಕೊಂಡೇ ಮುಂಗಡ ಪತ್ರ ಸಿದ್ಧಪಡಿಸಿರುವುದೂ ಸ್ಪಷ್ಟಗೊಳ್ಳುತ್ತದೆ. ಹಣಕಾಸು ಸಚಿವರು ಹಗ್ಗದ ಮೇಲಿನ ನಡಿಗೆಯಲ್ಲಿ ಸಮತೋಲನ ಸಾಧಿಸಲು ಸಾಕಷ್ಟು ಶ್ರಮಿಸಿರುವುದೂ ವೇದ್ಯವಾದರೂ, ಸಾಮಾಜಿಕ ವಲಯಕ್ಕೆ  ಹೆಚ್ಚು ಹಣ ನಿಗದಿ ಮಾಡಿ ಗಮನ ಸೆಳೆದಿದ್ದಾರೆ.

ಕೃಷಿ ವಲಯಕ್ಕೆ ಹೆಚ್ಚು ಆದ್ಯತೆ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಕೃಷಿಯ ಪಾಲು ಕಡಿಮೆಯಾಗುತ್ತಲೇ ಸಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ  ರೂ 7860 ಕೋಟಿ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗೆ (ನಬಾರ್ಡ್) ರೂ 3000 ಕೋಟಿ ನೆರವು, ಸಾವಯವ ಕೃಷಿ ವಿಧಾನಗಳಿಗೆ ಹೆಚ್ಚು ಉತ್ತೇಜನ ನೀಡುವುದು ಮತ್ತು ರೈತರಿಗೆ ಶೇ 3ರಷ್ಟು ಬಡ್ಡಿ ಸಬ್ಸಿಡಿ ಘೋಷಿಸಿರುವ ಕ್ರಮಗಳು ‘ಡಿಜಿಪಿ’ಯಲ್ಲಿ ಕೃಷಿಯ ಪಾಲು ಹೆಚ್ಚಿಸಲು ಒಟ್ಟಾಗಿ ನೆರವಾಗಲಿವೆ.

ದೇಶದಲ್ಲಿ  ಬಹುತೇಕ ಕೃಷಿ ಉತ್ಪನ್ನಗಳನ್ನು ಅಗ್ಗದ ದರಕ್ಕೆ ಮಾರಾಟ ಮಾಡುತ್ತಿರುವುದರಿಂದ ಕೃಷಿ ಸಮುದಾಯದ ಆದಾಯದ ಮಟ್ಟ ಅತ್ಯಂತ ಕೆಳಮಟ್ಟದಲ್ಲಿಯೇ ಇದೆ.  ಈ ಹಿನ್ನೆಲೆಯಲ್ಲಿ, ಕೃಷಿ ಉತ್ಪನ್ನಗಳ ಸಂಸ್ಕರಣೆ ರಂಗದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವ, 15 ಬೃಹತ್ ಆಹಾರ ಪಾರ್ಕ್‌ಗಳ ಸ್ಥಾಪನೆ ಮತ್ತು ಶೈತ್ಯಾಗಾರ ಸರಣಿಗಳಿಗೆ ಮೂಲಸೌಕರ್ಯ ಸ್ಥಾನಮಾನ ನೀಡುವ ಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ಆದಾಯ ಮಟ್ಟ ಹೆಚ್ಚಿಸಲು ಮತ್ತು ಗ್ರಾಮೀಣ ಜನರ ಬಳಿ ಹೆಚ್ಚು ಹಣ ಇರುವಂತಾಗಲು ನೆರವಾಗಲಿವೆ.

ಕೃಷಿಗೆ ಆದ್ಯತೆ ನೀಡಿರುವ ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್‌ಗೆ ಪೂರಕವಾಗಿರುವ ಕೇಂದ್ರ ಸರ್ಕಾರದ ಈ ಕ್ರಮಗಳು ಖಂಡಿತವಾಗಿಯೂ ರಾಜ್ಯದ ರೈತ ಸಮುದಾಯಕ್ಕೆ ಹೆಚ್ಚು ಪ್ರಯೋಜನ ತರಲಿವೆ. ಆದಾಯ ತೆರಿಗೆ: ಆದಾಯ ತೆರಿಗೆ ಹಂತದಲ್ಲಿ ಕೆಲ ಬದಲಾವಣೆ ಮಾಡಿರುವುದೂ ಸ್ವಾಗತಾರ್ಹ ಹೆಜ್ಜೆಯಾಗಿದೆ. 80ಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರಿಗೆ ್ಙ 5 ಲಕ್ಷದವರೆಗೆ ತೆರಿಗೆ ವಿನಾಯ್ತಿ ಘೋಷಿಸಿರುವ ಪ್ರಣವ್ ಮುಖರ್ಜಿ ಉತ್ತಮ ಕೆಲಸ ಮಾಡಿದ್ದಾರೆ.

ದೇಶದ ಅರ್ಥ ವ್ಯವಸ್ಥೆಯು ಪ್ರಗತಿಯ ಪಥದಲ್ಲಿರುವಾಗ ಮತ್ತು ಆದಾಯ ತೆರಿಗೆಯ ಗರಿಷ್ಠ ದರ  ತಗ್ಗಿಸುವುದನ್ನು ಉತ್ತೇಜಿಸುವ ಹಲವಾರು ವಿದ್ಯಮಾನಗಳು ಘಟಿಸುತ್ತಿರುವ ಸದ್ಯದ ಸಂದರ್ಭದಲ್ಲಿ, ಸಚಿವರು ಗರಿಷ್ಠ ತೆರಿಗೆ ದರಗಳನ್ನು ಇನ್ನಷ್ಟು ಇಳಿಸಬಹುದಾಗಿತ್ತು. ಸಿಂಗಪುರದಂತಹ ಹಲವಾರು ದೇಶಗಳು ಶೇ 10ಕ್ಕಿಂತ ಕಡಿಮೆ ದರದಲ್ಲಿ  ಆದಾಯ ತೆರಿಗೆಗಳನ್ನು ವಿಧಿಸಿರುವಾಗ, ನಮ್ಮಲ್ಲಿ ಮಾತ್ರ ಗರಿಷ್ಠ ಪ್ರಮಾಣದ ತೆರಿಗೆ ದರಗಳಿವೆ. ವ್ಯಕ್ತಿಯೊಬ್ಬ ಒಂದು ರೂಪಾಯಿ ಗಳಿಸಿದರೆ ಅದರ ಮೇಲೆ ಒಂದು ಮೂರಾಂಶದಷ್ಟು (1/3) ತೆರಿಗೆ ಹೇರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ದರಗಳನ್ನು ಇಳಿಸದಿರುವುದು ತೆರಿಗೆದಾರರ ಪಾಲಿಗಂತೂ  ತಣ್ಣೀರೆರಚಿದಂತಾಗಿದೆ.

ನ್ಯಾಯಾಂಗಕ್ಕೆ ವಿಶೇಷ ಅನುದಾನ: ನ್ಯಾಯಾಂಗ ಮೂಲಸೌಕರ್ಯ ರಂಗಕ್ಕೆ ್ಙ 1000 ಕೋಟಿಗಳಷ್ಟು ಅನುದಾನ ನಿಗದಿ ಮಾಡಿರುವುದು ಬಹು ದೊಡ್ಡ  ಮೊತ್ತವಾಗಿದ್ದರೂ ಸ್ವಾಗತಾರ್ಹ ಕ್ರಮವಾಗಿದೆ. ದೇಶದ ನ್ಯಾಯಾಂಗ ಮೂಲಸೌಕರ್ಯಗಳನ್ನು ಹೆಚ್ಚಿಸಲು ತುರ್ತಾಗಿ ಗಮನ ನೀಡಬೇಕಾಗಿದೆ. ಈ ಹಿಂದಿನ ಹಲವಾರು ಬಜೆಟ್‌ಗಳು ಇದನ್ನು ನಿರ್ಲಕ್ಷಿಸುತ್ತಲೇ ಬಂದಿದ್ದವು.ಈ ಬಜೆಟ್‌ನಲ್ಲಿನ ಈ ವಿಶೇಷ ಅನುದಾನವು ಬಹಳ ದಿನಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿರುವ ಮೊಕದ್ದಮೆಗಳ ತ್ವರಿತ ವಿಲೇವಾರಿಗೆ ಖಂಡಿತವಾಗಿಯೂ ನೆರವಾಗಲಿದೆ.

ಆರ್ಥಿಕ ವೃದ್ಧಿ ದರವು ಶೇ 8ಕ್ಕಿಂತ ಹೆಚ್ಚಿಗೆ ಇರುವಾಗ ಮತ್ತು ದೇಶಿ ಹಣಕಾಸು ವ್ಯವಸ್ಥೆಯ ಒಟ್ಟಾರೆ ಪರಿಸ್ಥಿತಿ ಸ್ಥಿರವಾಗಿರುವಾಗ, ಹಣಕಾಸು ಸಚಿವರು ಕೈಗಾರಿಕಾ ಬೆಳವಣಿಗೆಗೆ ನೆರವಾಗುವ ಇನ್ನಷ್ಟು ತೆರಿಗೆ ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸಬಹುದಿತ್ತು. ದೇಶದ ಆರ್ಥಿಕ ವೃದ್ಧಿ ಯಶೋಗಾಥೆಯನ್ನು ಇನ್ನಷ್ಟು ತೀವ್ರಗೊಳಿಸಲು ಪ್ರಣವ್ ಮುಖರ್ಜಿ, ಹಣಕಾಸಿನ ಮತ್ತು ಸಾಂಸ್ಥಿಕ ಸುಧಾರಣಾ ಕ್ರಮಗಳನ್ನೂ ಕೈಗೊಳ್ಳಬಹುದಾಗಿತ್ತು. ಒಟ್ಟಾರೆ ಮುಂಗಡ ಪತ್ರವು ಹಲವಾರು ಬಗೆಯಲ್ಲಿ ಸಕಾರಾತ್ಮಕವಾಗಿದ್ದರೂ, ಅದರಲ್ಲಿ ದೂರದೃಷ್ಟಿಯ ಕೊರತೆ ಕಾಣುತ್ತಿರುವುದು ಮಾತ್ರ ದುರದೃಷ್ಟಕರ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.