ADVERTISEMENT

ಸಕಾಲ ವ್ಯಾಪ್ತಿಗೆ ಪಿಂಚಣಿ ಸೌಲಭ್ಯ?

​ಪ್ರಜಾವಾಣಿ ವಾರ್ತೆ
Published 8 ಮೇ 2012, 19:30 IST
Last Updated 8 ಮೇ 2012, 19:30 IST
ಸಕಾಲ ವ್ಯಾಪ್ತಿಗೆ ಪಿಂಚಣಿ ಸೌಲಭ್ಯ?
ಸಕಾಲ ವ್ಯಾಪ್ತಿಗೆ ಪಿಂಚಣಿ ಸೌಲಭ್ಯ?   

ಬೆಂಗಳೂರು: `ಸಕಾಲ~ ಸೇವೆಗಳ ವ್ಯಾಪ್ತಿಗೆ ಸಾಮಾಜಿಕ ಭದ್ರತಾ ಪಿಂಚಣಿ ಸೌಲಭ್ಯವನ್ನೂ ಸೇರ್ಪಡೆಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ಮಂಗಳವಾರ ಇಲ್ಲಿ ಹೇಳಿದರು.

`ಸಕಾಲ~ ಸೇವೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪಾಲಿಕೆ ವ್ಯಾಪ್ತಿಯ ನಾಗರಿಕ ಹಿತರಕ್ಷಣಾ ಸಮಿತಿಗಳ ಪದಾಧಿಕಾರಿಗಳ ಸಭೆಯ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

`ನಾಗರಿಕರ ಹಿತದೃಷ್ಟಿಯಿಂದ ಪಿಂಚಣಿ ಸೌಲಭ್ಯವನ್ನು ಸಕಾಲ ಸೇವೆಗಳ ವ್ಯಾಪ್ತಿಗೆ ತರುವ ಬಗ್ಗೆ ಸಾಕಷ್ಟು ಬೇಡಿಕೆಗಳು ಬಂದಿವೆ. `ಸಕಾಲ~ ಸೇವೆಗೆ ಸಂಬಂಧಿಸಿದಂತೆ ದಾಖಲಾದ 174 ದೂರುಗಳ ಪೈಕಿ 150 ದೂರುಗಳು 151 ಸೇವೆಗಳಿಗೆ ಹೊರತಾಗಿವೆ. ಹೀಗಾಗಿ, ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ನಾಲ್ಕೈದು ಪಿಂಚಣಿಗಳ ಸೌಲಭ್ಯವನ್ನೂ `ಸಕಾಲ~ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಚರ್ಚೆ ನಡೆಯುತ್ತಿದೆ~ ಎಂದು ಸಚಿವರು ತಿಳಿಸಿದರು.

ಸೇವೆಗಳ ಸೇರ್ಪಡೆ: `11 ಇಲಾಖೆಗಳ 151 ಸೇವೆಗಳ ಅನುಷ್ಠಾನದ ಬಗ್ಗೆ ಜೂನ್ ಅಂತ್ಯದಲ್ಲಿ ಪರಾಮರ್ಶೆ ನಡೆಸಿದ ನಂತರ ಇನ್ನಷ್ಟು ಸೇವೆಗಳನ್ನು `ಸಕಾಲ~ ವ್ಯಾಪ್ತಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಅಲ್ಲದೆ, ಕೆಲವು ಸೇವೆಗಳನ್ನು ಸಾರ್ವಜನಿಕರು ಪಡೆಯಲು ಮುಂದೆ ಬರುತ್ತಿಲ್ಲ. ಅಂತಹ ಸೇವೆಗಳನ್ನು ಬದಲಾವಣೆ ಮಾಡಲು ಕೂಡ ಪರಿಶೀಲಿಸಲಾಗುವುದು~ ಎಂದರು.

`ಮೊದಲನೇ ಹಂತದಲ್ಲಿ `ಸಕಾಲ~ ಸೇವೆಯನ್ನು ಪ್ರಾರಂಭಿಸಿದಾಗ ಯಾವುದೇ ಇಲಾಖೆಗಳ ಮೇಲೆ ಸರ್ಕಾರ ಒತ್ತಡ ಹೇರಲಿಲ್ಲ. ಆಯಾ ಇಲಾಖೆಗಳು ನೀಡಿದ ಪಟ್ಟಿ, ಸೇವಾ ಸೌಲಭ್ಯ ಒದಗಿಸಲು ನೀಡಿದ ಸಮಯಾವಕಾಶದ ಆಧಾರದ ಮೇರೆಗೆ ಕಾಯ್ದೆ ಜಾರಿಗೆ ತರಲಾಗಿದೆ. ಇದೀಗ ಸಾರ್ವಜನಿಕರಿಂದ ಹೆಚ್ಚಿನ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರುವಂತೆ ಬೇಡಿಕೆ ಬಂದಿರುವುದರಿಂದ ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ~ ಎಂದರು.

`ಸುಮಾರು 85 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿ `ಸಕಾಲ~ ವ್ಯಾಪ್ತಿಯಡಿ ಕೇವಲ ಐದು ಸೇವೆಗಳನ್ನು ಒದಗಿಸುತ್ತಿರುವುದು ಭೂಷಣವಲ್ಲ. ಹೀಗಾಗಿ, ಕಂದಾಯ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಪ್ರಮುಖ ಇಲಾಖೆಗಳ ಇನ್ನಷ್ಟು ಸೇವೆಗಳನ್ನು ಕೂಡ ಯೋಜನೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಗುವುದು~ ಎಂದರು.

ಆನ್‌ಲೈನ್‌ನಲ್ಲಿ ಅರ್ಜಿ: `ಮಾಹಿತಿ ಹಕ್ಕು ಕಾಯ್ದೆಯನ್ನು ಕೂಡ ಈ ತಿಂಗಳಾಂತ್ಯದೊಳಗೆ `ಸಕಾಲ~ ವ್ಯಾಪ್ತಿಗೆ ತರಲಾಗುವುದು. ಅಲ್ಲದೆ, ಮುಂದಿನ ತಿಂಗಳೊಳಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುವ ಉ್ದ್ದದೇಶದಿಂದ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಲಾಗುವುದು~ ಎಂದು ಅವರು ಹೇಳಿದರು.

`ಪಾಸ್‌ಪೋರ್ಟ್‌ಗಳ ಪರಿಶೀಲನೆಗೆ ಪೊಲೀಸರು 90 ಕಾಲಾವಕಾಶ ಕೋರುತ್ತಿದ್ದಾರೆ. ಆದರೆ, 30 ದಿನಗಳೊಳಗೆ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸುವ ಸಂಬಂಧ ಚರ್ಚೆ ನಡೆಯುತ್ತಿದೆ~ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು.

ಬೆಂಗಳೂರು ಮೇಯರ್ ಡಿ. ವೆಂಕಟೇಶಮೂರ್ತಿ, ಬಿಬಿಎಂಪಿ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, ಮುಖ್ಯಮಂತ್ರಿಗಳ ಸಲಹೆಗಾರ (ನಗರಾಭಿವೃದ್ಧಿ) ಡಾ. ಎ. ರವೀಂದ್ರ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.