ADVERTISEMENT

ಸಕ್ಕರೆ ಕಾರ್ಖಾನೆ: ₹335 ಕೋಟಿ ತೆರಿಗೆ ವಿನಾಯ್ತಿ

ಸರ್ಕಾರದ ಬೊಕ್ಕಸಕ್ಕೆ ನಷ್ಟ: ಬಾಕಿ ಉಳಿಕೆ ಪ್ರಮಾಣ ಕರ್ನಾಟಕದಲ್ಲೇ ಕಡಿಮೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2016, 19:30 IST
Last Updated 3 ಆಗಸ್ಟ್ 2016, 19:30 IST
ಸಕ್ಕರೆ ಕಾರ್ಖಾನೆ:  ₹335 ಕೋಟಿ ತೆರಿಗೆ ವಿನಾಯ್ತಿ
ಸಕ್ಕರೆ ಕಾರ್ಖಾನೆ: ₹335 ಕೋಟಿ ತೆರಿಗೆ ವಿನಾಯ್ತಿ   

ಬೆಂಗಳೂರು:  46 ಸಕ್ಕರೆ ಕಾರ್ಖಾನೆಗಳಿಗೆ ಮುಂದಿನ ಎರಡು ವರ್ಷ  ಖರೀದಿ ತೆರಿಗೆ ಹಾಗೂ ರಸ್ತೆ ಸುಂಕದಿಂದ ವಿನಾಯ್ತಿ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ₹335 ಕೋಟಿ ನಷ್ಟ ಅಗಲಿದೆ. ಸಕ್ಕರೆ ಮತ್ತು ಸಹಕಾರ ಸಚಿವ ಎಚ್‌.ಎಸ್‌. ಮಹದೇವ ಪ್ರಸಾದ್‌ ಅವರು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಕಳೆದ ಮೂರು ವರ್ಷದಿಂದ ಕಬ್ಬು ಬೆಳೆಗಾರರಿಗೆ ಬಾಕಿ ಉಳಿಸಿಕೊಂಡ ಮೊತ್ತವನ್ನು ಪಾವತಿಸಿದ ಸಕ್ಕರೆ ಕಾರ್ಖಾನೆಗಳಿಗೆ ಮುಂದಿನ ಎರಡು ವರ್ಷ ಖರೀದಿ ತೆರಿಗೆ ಹಾಗೂ ರಸ್ತೆ ಸುಂಕದಿಂದ ವಿನಾಯ್ತಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು.

ಸರ್ಕಾರದ ವಿನಾಯ್ತಿ ಪಡೆಯಲು ಮುಂದಾದ 66 ಕಾರ್ಖಾನೆಗಳು ಪಾವತಿಸಬೇಕಾಗಿದ್ದ ₹2033.24 ಕೋಟಿ ರೂ.ಗಳ ಪೈಕಿ ₹1834.95 ಕೋಟಿ ಪಾವತಿಸಿದ್ದು, ₹198.29 ಕೋಟಿ ಮಾತ್ರ ಇದೆ. ತೆರಿಗೆ ವಿನಾಯ್ತಿ ನೀಡಿದ್ದರಿಂದಾಗಿ ₹335 ಕೋಟಿ ನಷ್ಟ ಉಂಟಾಗಲಿದೆ ಎಂದು ವಿವರಿಸಿದರು.

ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ನೀಡಬೇಕಾದ ಬಾಕಿ ಪ್ರಮಾಣ ಕರ್ನಾಟಕದಲ್ಲಿ ಅತ್ಯಂತ  ಕಡಿಮೆ ಇದೆ. ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳು ನೀಡಬೇಕಾದ ಬಾಕಿ ಪ್ರಮಾಣ ಶೇ 0.63 ರಷ್ಟು ಇದೆ. ಮಹಾರಾಷ್ಟ್ರ(ಶೇ3.30), ಉತ್ತರಪ್ರದೇಶ (ಶೇ 13.34), ಬಿಹಾರ (ಶೇ 4.65)ದ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ(ಆವರಣದಲ್ಲಿ ಇರುವುದು ಆಯಾರಾಜ್ಯಗಳ ಬಾಕಿ ಪ್ರಮಾಣ) ಎಂದರು. 

ಖರೀದಿ ತೆರಿಗೆ ಮತ್ತು ರಸ್ತೆ ಸುಂಕ ವಿನಾಯ್ತಿ ನೀಡುವುದರಿಂದ 2016–17ರಲ್ಲಿ ₹152 ಕೋಟಿ ಹಾಗೂ 2017–18ರಲ್ಲಿ ₹183 ಕೋಟಿ ಆದಾಯ ಬೊಕ್ಕಸಕ್ಕೆ ನಷ್ಟವಾಗಲಿದೆ ಎಂದು ಹೇಳಿದರು.

ರೇಣುಕಾ ಶುಗರ್ಸ್‌ ಬಾಕಿ ₹70 ಕೋಟಿ: ಸರ್ಕಾರದ ಆದೇಶ ಹಾಗೂ ಕ್ರಮ ಪ್ರಶ್ನಿಸಿ ಕೋರ್ಟ್‌ಗೆ ಹೋಗಿರುವ ರೇಣುಕಾ ಶುಗರ್ಸ್‌ ₹70 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಹೇಳಿದ ಮಹದೇವ ಪ್ರಸಾದ್‌ ಅವರು, ಸದರಿ ಕಾರ್ಖಾನೆ ನೀಡಬೇಕಾದ ಬಾಕಿಗಾಗಿ ಸಕ್ಕರೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಕೋರ್ಟ್‌ ತೀರ್ಮಾನ ಆಧರಿಸಿ, ರೈತರ ಬಾಕಿ ಕೊಡಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಉಗ್ರಾಣ ನಿರ್ಮಾಣಕ್ಕೆ ₹732 ಕೋಟಿ: ನಬಾರ್ಡ್‌ನ ₹732 ಕೋಟಿ ನೆರವಿನಲ್ಲಿ 10.88 ಲಕ್ಷ ಟನ್‌ ಸಾಮರ್ಥ್ಯದ 267 ಉಗ್ರಾಣಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ ಎಂದು  ಮಹದೇವ ಪ್ರಸಾದ್‌ ಹೇಳಿದರು.

30 ವರ್ಷದ ಗುತ್ತಿಗೆ ಆಧಾರದಲ್ಲಿ ಎಪಿಎಂಸಿ, ಟಿಎಪಿಸಿಎಂಎಸ್‌ನ ಜಾಗ ಪಡೆದು ಉಗ್ರಾಣ ನಿರ್ಮಿಸಲಾಗುವುದು. ಸದ್ಯ 14.17 ಲಕ್ಷ ಟನ್‌ ಸಾಮರ್ಥ್ಯದ ಆಹಾರ ಧಾನ್ಯ ದಾಸ್ತಾನು ಮಾಡುವ ಉಗ್ರಾಣಗಳಿದ್ದವು. ಹೊಸ ಉಗ್ರಾಣಗಳ ನಿರ್ಮಾಣ ಕಾಮಗಾರಿ ಮುಗಿದರೆ ಒಟ್ಟು 25 ಲಕ್ಷ ಟನ್‌ ಆಹಾರ ಧಾನ್ಯಗಳನ್ನು   ದಾಸ್ತಾನು ಮಾಡಬಹುದಾಗಿದೆ ಎಂದರು.

ರೈತರಿಗೆ ₹11 ಸಾವಿರ ಕೋಟಿ ಸಾಲ: ಈ ವರ್ಷ 25 ಲಕ್ಷ ರೈತರಿಗೆ ₹11,000 ಕೋಟಿ ಸಾಲ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ನಬಾರ್ಡ್‌ನಿಂದ ₹3,120 ಕೋಟಿ ನೆರವು ಸಿಗಲಿದ್ದು, ಉಳಿದ ಮೊತ್ತವನ್ನು ಸರ್ಕಾರದ ನೆರವಿನಲ್ಲಿ ಅಪೆಕ್ಸ್‌ ಬ್ಯಾಂಕ್‌ ಹೊಂದಿಸಿಕೊಳ್ಳಲಿದೆ.

ಎಪಿಎಂಸಿಗಳಲ್ಲಿರುವ ಹಣವನ್ನು  ಡಿಸಿಸಿ ಬ್ಯಾಂಕ್‌ಗಳಲ್ಲಿಯೇ ಠೇವಣಿ ಇಡಬೇಕು ಎಂದು ಸೂಚಿಸಲಾಗಿದೆ. ಇದಲ್ಲದೇ, ವಿವಿಧ ಇಲಾಖೆಗಳು ರಾಷ್ಟ್ರೀಕೃತ ಬ್ಯಾಂಕ್‌ಲ್ಲಿ ಠೇವಣಿ ಇಡುವ ಮೊತ್ತವನ್ನು ಡಿಸಿಸಿ ಬ್ಯಾಂಕ್‌ ಅಥವಾ ಅಪೆಕ್ಸ್‌ ಬ್ಯಾಂಕ್‌ನಲ್ಲಿಡಬೇಕು ಎಂದು ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದರು.

ಇಂದು ಮೈಸೂರು ದಸರಾ ಉನ್ನತ ಮಟ್ಟದ ಸಮಿತಿ ಸಭೆ
ಮೈಸೂರು ದಸರಾ ಉತ್ಸವದ  ಪೂರ್ವ ಸಿದ್ಧತೆಗಾಗಿ ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಸಭೆ ಗುರುವಾರ (ಆಗಸ್ಟ್‌ 4) ವಿಧಾನಸೌಧದಲ್ಲಿ ನಡೆಯಲಿದೆ ಎಂದು ಸಚಿವ ಮಹದೇವ ಪ್ರಸಾದ್‌ ಅವರು ಸುದ್ದಿಗಾರರಿಗೆ ತಿಳಿಸಿದರು. ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು, ಈ ವರ್ಷದ ಉತ್ಸವದ ಆಚರಣೆ ವೈಶಿಷ್ಟ್ಯಗಳ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.