ADVERTISEMENT

ಸಚಿವರ ಮೇಲೆ ರೇಷ್ಮೆ ಗೂಡು ಎಸೆತ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST
ಸಚಿವರ ಮೇಲೆ ರೇಷ್ಮೆ ಗೂಡು ಎಸೆತ
ಸಚಿವರ ಮೇಲೆ ರೇಷ್ಮೆ ಗೂಡು ಎಸೆತ   

ಬೆಂಗಳೂರು:  ರೇಷ್ಮೆ ಗೂಡಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ  ಮಂಗಳವಾರ ಪ್ರತಿಭಟನೆ ನಡೆಸಿದ ಸುಂಕರಹಿತ ರೇಷ್ಮೆ ಆಮದು ವಿರೋಧಿ ಅಖಿಲ ಭಾರತ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರನ್ನು ಭೇಟಿ ಮಾಡಲು ಬಂದಿದ್ದ ಸಚಿವ ಬಿ.ಎನ್.ಬಚ್ಚೇಗೌಡ ಅವರ ಮೇಲೆ ಪ್ರತಿಭಟನಾಕಾರರು ರೇಷ್ಮೆ ಗೂಡು ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದಾಗಿ ಸಚಿವರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಶಾಂತಗೊಳಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಇದಕ್ಕೂ ಮುನ್ನ ನಗರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ರ‌್ಯಾಲಿ ನಡೆಸಿದ ಪ್ರತಿಭಟನಾಕಾರರು `ರೇಷ್ಮೆ ಆಮದು ಸುಂಕವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿರುವುದರಿಂದ ದೇಶದಲ್ಲಿ ರೇಷ್ಮೆ ಬೆಲೆ ಕುಸಿದಿದೆ. ಇದರಿಂದ ರೇಷ್ಮೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಶೇ 31ರಷ್ಟಿದ್ದ ರೇಷ್ಮೆ ಆಮದು ಸುಂಕವನ್ನು ಸರ್ಕಾರ ಶೇ 5ಕ್ಕೆ ಇಳಿಸಿದೆ. ಸರ್ಕಾರದ ಈ ಕ್ರಮ ದೇಶದ ರೇಷ್ಮೆ ಬೆಳೆಗಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆಮದು ಸುಂಕವನ್ನು ಇಳಿಸಿದ ನಂತರ ದೇಶಿಯ ಮಾರುಕಟ್ಟೆಯಲ್ಲಿ ರೇಷ್ಮೆ ಬೆಲೆ ಗಣನೀಯವಾಗಿ ಕುಸಿಯುತ್ತಿದೆ. ಜನವರಿ ತಿಂಗಳಿನಲ್ಲಿ ಕೆ.ಜಿ ಗೆ 312 ರೂಪಾಯಿ ಇದ್ದ ರೇಷ್ಮೆ ಗೂಡಿನ ಬೆಲೆ, ಆಮದು ಸುಂಕ ಕಡಿಮೆ ಮಾಡಿದ ಬಳಿಕ 229 ರೂಪಾಯಿಗೆ ಕುಸಿದಿದೆ. ಬೆಲೆ ಕುಸಿತದಿಂದ ರೇಷ್ಮೆ ಬೆಳೆಗಾರರು ಕಂಗಲಾಗಿದ್ದಾರೆ~ ಎಂದು ಸಮಿತಿಯ ಸಂಘಟನಾ ಸಂಚಾಲಕ ಜಿ.ಸಿ.ಬಯ್ಯಾರೆಡ್ಡಿ ಹೇಳಿದರು.

`ಇಂತಹ ಸಂದಿಗ್ಧ ಸ್ಥಿತಿಯಲ್ಲೂ ಕೇಂದ್ರ ಸರ್ಕಾರ ವಾರ್ಷಿಕ 2,500 ಮೆಟ್ರಿಕ್ ಟನ್ ರೇಷ್ಮೆಯನ್ನು ಆಮದು ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ಅವೈಜ್ಞಾನಿಕ ಕ್ರಮದಿಂದ ರೇಷ್ಮೆ ಬೆಳೆಗಾರರು ಮತ್ತಷ್ಟು ದಿವಾಳಿಯಾಗುವ ಆತಂಕ ಎದುರಾಗಿದೆ~ ಎಂದು ರಾಜ್ಯ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.

`ಸುಂಕರಹಿತ ರೇಷ್ಮೆ ಆಮದು ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ~ ಎಂದರು.

ರೇಷ್ಮೆ ಆಮದು ಸುಂಕವನ್ನು ಶೇ 31ಕ್ಕೆ ಹೆಚ್ಚಿಸಬೇಕು. ರೇಷ್ಮೆಯನ್ನು ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಕೈಬಿಡಬೇಕು. ರಾಜ್ಯ ಸರ್ಕಾರ ಕೆ.ಜಿ ರೇಷ್ಮೆ ಗೂಡಿಗೆ 350 ರೂಪಾಯಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಬಚ್ಚೇಗೌಡ ಅವರು, `ಕೇಂದ್ರ ಸರ್ಕಾರದ ಸುಂಕರಹಿತ ರೇಷ್ಮೆ ಆಮದು ನೀತಿಯಿಂದ ರೇಷ್ಮೆ ಗೂಡಿನ ಬೆಲೆ ಕುಸಿದಿದೆ. ಬೆಲೆ ಕುಸಿತಕ್ಕೆ ರಾಜ್ಯ ಸರ್ಕಾರ ಕಾರಣವಲ್ಲ.

ಆದ್ದರಿಂದ ರೇಷ್ಮೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಸರ್ಕಾರವೇ ಕ್ರಮ ಕೈಗೊಳ್ಳಬೇಕು~ ಎಂದರು. ಸಚಿವರ ಈ ಹೇಳಿಕೆಯಿಂದ ಕೆರಳಿದ ಪ್ರತಿಭಟನಾಕಾರರು ಬಚ್ಚೇಗೌಡ ಅವರ ಮೇಲೆ ರೇಷ್ಮೆ ಗೂಡುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಚಿವರು `ರೇಷ್ಮೆ ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ರೇಷ್ಮೆ ಬೆಳೆಗಾರರ ಮುಖಂಡರ ನಿಯೋಗವನ್ನು ದೆಹಲಿಗೆ ಕರೆದೊಯ್ದು ಬೆಂಬಲ ಬೆಲೆ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು~ ಎಂದು ಭರವಸೆ ನೀಡಿದರು.

ಸಚಿವರ ಭರವಸೆಯಿಂದ ತೃಪರಾಗದ ಪ್ರತಿಭಟನಾಕಾರರು `ರೇಷ್ಮೆ ಗೂಡಿಗೆ ವಾರದೊಳಗೆ ಬೆಂಬಲ ಬೆಲೆ ಘೋಷಿಸದಿದ್ದರೆ ರೇಷ್ಮೆ ಬೆಳೆಯುವ ಎಲ್ಲ 13 ಜಿಲ್ಲೆಗಳಲ್ಲಿ ಜೂ.28ರಂದು ಬಂದ್ ನಡೆಸಲಾಗುತ್ತದೆ. ರೇಷ್ಮೆ ಮಾರುಕಟ್ಟೆಗಳಲ್ಲಿ ವಹಿವಾಟು ಸ್ಥಗಿತಗೊಳಿಸಿ ಉಗ್ರ ಹೋರಾಟ ನಡೆಸಲಾಗುತ್ತದೆ~ ಎಂದು ಎಚ್ಚರಿಕೆ ನೀಡಿದರು.

ವಿವಿಧ ಜಿಲ್ಲೆಗಳ ರೇಷ್ಮೆ ಬೆಳೆಗಾರರು, ನೇಕಾರರ ಸಂಘಟನೆಗಳ ಸದಸ್ಯರು ಹಾಗೂ ರೇಷ್ಮೆ ಉದ್ದಿಮೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.