ADVERTISEMENT

ಸಚಿವರ ವಿರುದ್ಧ ಹರಿಹಾಯ್ದ ಡಾ.ಜಿ. ಪರಮೇಶ್ವರ್

ಅರ್ಧದಲ್ಲೇ ನಿರ್ಗಮಿಸಿದ ಮಹದೇವಪ್ಪ, ಶ್ರೀನಿವಾಸಪ್ರಸಾದ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 19:30 IST
Last Updated 6 ಜನವರಿ 2014, 19:30 IST

ಬೆಂಗಳೂರು: ಪಕ್ಷದ ಕಾರ್ಯಕ್ರಮ­ಗ­ಳಲ್ಲಿ ಭಾಷಣ ಮುಗಿಸಿ ತಕ್ಷಣವೇ ನಿರ್ಗ­ಮಿಸುವ ಸಚಿವರ ವರ್ತನೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್  ಬಹಿರಂಗ­ವಾಗಿಯೇ ಅಸಮಾ­ಧಾನ ಹೊರಹಾಕಿ­ದರು. ‘ಸಚಿವರಿಗೆ ಪುರುಸೊತ್ತು ಇಲ್ಲ­ದಿ­ದ್ದರೆ ಪಕ್ಷದ ಕಾರ್ಯ­ಕ್ರಮಗಳಿಂದ ದೂರ ಇರಲಿ’ ಎಂದು ನೇರವಾಗಿ ಹೇಳಿದರು.

ಕೆಪಿಸಿಸಿ ಪರಿಶಿಷ್ಟ ಜಾತಿಗಳ ವಿಭಾಗವು ಸೋಮವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್‌ ಸಮಾವೇಶದಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮತ್ತು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಮಾತು ಮುಗಿಸಿ ವೇದಿಕೆ­ಯಿಂದ ನಿರ್ಗಮಿಸಿದರು. ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ   ಪೂರ್ವನಿಗ­ದಿತ ಕಾರ್ಯಕ್ರಮಕ್ಕೆ ತೆರಳಿದರು.

ಬಳಿಕ ಮಾತನಾಡಿದ ಪರಮೇಶ್ವರ್‌, ಸಚಿವರ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿ­ಸಿದರು. ‘ಇದು ಒಂದು ಮಹತ್ವದ ಕಾರ್ಯ­ಕ್ರಮ. ಸಚಿವರು ಮಧ್ಯದಲ್ಲೇ ವೇದಿಕೆಯಿಂದ ನಿರ್ಗಮಿಸುವುದನ್ನು ನಾನು ಒಪ್ಪುವುದಿಲ್ಲ. ಅವರಿಗೆ ಇಲ್ಲಿ ಸಮಯ ನೀಡಲು ಆಗದಿದ್ದರೆ, ಪಕ್ಷದ ಕಾರ್ಯಕ್ರಮಗಳಿಂದ ದೂರ ಇರಲಿ. ಬಿಟ್ಟುಬಿಡಿ’ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಹರಿಹಾಯ್ದರು.

‘ದಲಿತರ ಅಹವಾಲು ಅರಿಯಲು ಎರಡು ಗಂಟೆ ಮೀಸಲಿಡಲು ಸಚಿ­ವರಿಗೆ ಸಾಧ್ಯವಿಲ್ಲವೇ. ನಾವು (ದಲಿತರು) ನಿಮ್ಮ ಮಾತನ್ನು ಕೇಳಲು ಇಲ್ಲಿಗೆ ಬಂದಿಲ್ಲ. ನಮ್ಮ ಅಹವಾಲು­ಗಳನ್ನು ನಿಮ್ಮ ಮುಂದಿ­ಡಲು ಬಂದಿ­ದ್ದೇವೆ’ ಎಂದು ಸಿಟ್ಟಿನಿಂದ ಹೇಳಿದರು.

ಇಬ್ಬಗೆ ವಾದ: ದಲಿತರಿಗೆ ಮೀಸಲಾತಿ ಒದಗಿಸುವ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್‌  ವ್ಯಕ್ತಪಡಿ­ಸಿದ ವಿಭಿನ್ನ ಅಭಿಪ್ರಾಯ­ಗಳಿಗೂ ವೇದಿಕೆ ಸಾಕ್ಷಿಯಾಯಿತು. ಪರಿ­ಶಿಷ್ಟರಿಗೆ ಅವರ ಜನಸಂಖ್ಯೆಗೆ ಅನುಗುಣ­ವಾಗಿ ಮೀಸ­ಲಾತಿ ದೊರೆಯಬೇಕು ಎಂದು ಪ್ರತಿಪಾ­ದಿಸಿದ ಖರ್ಗೆ, ಈ ದಿಸೆಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಆದರೆ, ಖರ್ಗೆ ಅವರ ವಾದಕ್ಕೆ ವಿರು­ದ್ಧ­ವಾಗಿ ಮಾತನಾಡಿದ ಪರ­ಮೇಶ್ವರ್‌, ‘ದಲಿತರು ಮತಬ್ಯಾಂಕ್‌­ಗಳಾಗಿದ್ದಾರೆ. ನಮಗೆ ಮೀಸಲಾತಿ ಬೇಡ, ನಮ್ಮನ್ನು ಸಶಕ್ತಗೊಳಿಸಿ’ ಎಂದರು.

‘ದಲಿತರಿಗೆ ಖಾಸಗಿ ವಲಯದಲ್ಲೂ ಮೀಸಲಾತಿ ದೊರೆಯಬೇಕು. ಅರ್ಹತೆ ಇರುವವರಿಗೆ ವಿಶ್ವವಿದ್ಯಾಲಯದ ಕುಲ­ಪತಿ ಹುದ್ದೆಗಳೂ ಲಭಿಸಬೇಕು’ ಎಂದ ಅವರು, ಪ್ರೊ.ಗೋಮತಿ ದೇವಿ ಅವರಿಗೆ ದಾವಣಗೆರೆ ವಿ.ವಿ ಕುಲಪತಿ ಹುದ್ದೆ ಕೈತಪ್ಪಿರುವುದನ್ನು ಪ್ರಸ್ತಾಪಿ­ಸಿದರು.

ಸಚಿವರ ಸಮರ್ಥನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವಾಗ ಸಚಿವರು ಬೇಗ ನಿರ್ಗಮಿಸಿದ್ದನ್ನು ಸಮ­ರ್ಥಿಸಿಕೊಂಡರು. ಮಹತ್ವದ ಕೆಲಸ ಇರುವುದರಿಂದ ಅವರು ವೇದಿಕೆಯಿಂದ ತೆರಳಿರಬಹುದು ಎಂದರು.

ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಮೀಸಲಾತಿ ಸೌಲಭ್ಯ ಒದಗಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.