ಪಡುಬಿದ್ರಿ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರ ಕೆಂಗಣ್ಣಿಗೆ ಗುರಿಯಾದ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಉಚ್ಚಿಲದವರು. ಅವರ ತಂದೆ ಈಗಲೂ ಅಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಇದರಲ್ಲಿಯೇ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಬೆಳೆಸಿದ್ದಾರೆ.
ಬಡಾ ಗ್ರಾಮದ ಉಚ್ಚಿಲ ಪಣಿಯೂರಿನ ರಾಧಾಕೃಷ್ಣ ಶೆಣೈ ಮತ್ತು ನಳಿನಿ ದಂಪತಿಯ ಮೂವರು ಮಕ್ಕಳಲ್ಲಿ ಅನುಪಮಾ ದೊಡ್ಡವರು. ಇನ್ನಿಬ್ಬರು ಅಚ್ಯುತ ಮತ್ತು ಅರವಿಂದ. ಇವರೆಲ್ಲರೂ ಒಳ್ಳೆಯ ಕೆಲಸದಲ್ಲಿದ್ದಾರೆ. ಅನುಪಮಾ ಡಿವೈಎಸ್ಪಿಯಾಗಿದ್ದರೆ, ಅಚ್ಯುತ ಸಿವಿಲ್ ಎಂಜಿನಿಯರ್, ಅರವಿಂದ ದುಬೈಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್.
ಪೊಲೀಸ್ ಅಧಿಕಾರಿಯಾಗುವ ಕನಸು: ಅನುಪಮಾ ಮಂಗಳೂರಿನ ಕುಲಶೇಖರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಸೇಂಟ್ ಅಲೋಸಿಯಸ್ ಕಾಲೇಜಿನಲ್ಲಿ ಪೂರೈಸಿದ್ದಾರೆ.
ಪೊಲೀಸ್ ಅಧಿಕಾರಿಯಾಗಬೇಕು ಎಂಬುದು ಅವರ ಬಾಲ್ಯದ ಕನಸು. ಅದನ್ನು ನನಸು ಮಾಡಬೇಕು ಎಂಬ ಹಂಬಲದಿಂದ ಓದಿನ ಬಳಿಕ ದೆಹಲಿಗೆ ತೆರಳಿ, ಕೇಂದ್ರ ನಾಗರಿಕ ಸೇವಾ ಪರೀಕ್ಷೆಗೆ ತರಬೇತಿ ಪಡೆದರು. ಐಪಿಎಸ್ ಆಸೆ ಕೈಗೂಡದಿದ್ದಾಗ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಡಿವೈಎಸ್ಪಿಯಾಗಿ ನೇಮಕವಾಗಿದ್ದರು. ಪ್ರೊಬೆಷನರಿ ಹಂತವನ್ನು ಮಡಿಕೇರಿಯಲ್ಲಿ ಮುಗಿಸಿದ್ದರು.
‘ಕಲುಷಿತ ರಾಜಕೀಯದಿಂದಾಗಿ ಇದೀಗ ಕೂಡ್ಲಿಗಿಯಿಂದ ಇಂಡಿಗೆ ವರ್ಗಾವಣೆಗೊಂಡಿರುವ ನಮ್ಮ ಅಕ್ಕ ಪ್ರಾಮಾಣಿಕ ಅಧಿಕಾರಿ. ಕ್ಷುಲ್ಲಕ ರಾಜಕೀಯದಿಂದಾಗಿ ಅವರು ಇದನ್ನೆಲ್ಲಾ ಅನುಭವಿಸುವಂತಾಯಿತು’ ಎನ್ನುತ್ತಾರೆ ಸಹೋದರ ಅಚ್ಯುತ ಶೆಣೈ.
- ಅಬ್ದುಲ್ ಹಮೀದ್ ಪಡುಬಿದ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.