ADVERTISEMENT

ಸತ್ಯವನ್ನೇ ಹೇಳಿದ್ದೇನೆ: ನಾ.ಡಿಸೋಜ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 19:30 IST
Last Updated 9 ಜನವರಿ 2014, 19:30 IST

ಭಾರತೀಸುತ ವೇದಿಕೆ (ಮಡಿಕೇರಿ):  ‘ಕೆಲವರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಸತ್ಯವನ್ನು ಮರೆ­ಮಾಚಬಾರದೆಂದು ರವೀಂದ್ರನಾಥ್‌ ಟ್ಯಾಗೋರ್‌ ಒಂದೆಡೆ ಹೇಳಿದ್ದರು. ಅದರಂತೆ ನಾನು ನನ್ನ ಅಧ್ಯಕ್ಷೀಯ ಭಾಷಣ ಮಾಡಿದ್ದೇನೆ. ನನಗೆ ಸತ್ಯವೆನಿಸಿದ್ದನ್ನು ಹೇಳಿದ್ದೇನೆ’ ಎಂದು ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಸ್ಪಷ್ಟಪಡಿಸಿದರು.

ಗುರುವಾರ ಸಂಜೆ ನಡೆದ ಸಮ್ಮೇಳನದ ಸಮಾರೋಪ ಸಮಾ­ರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ತಮ್ಮ ಯಾವ ಮಾತು ಇತರರ ಮನಸ್ಸಿಗೆ ನೋವು ತಂದಿದೆ ಎನ್ನು­ವುದನ್ನು ಅವರೆಲ್ಲೂ ನೇರವಾಗಿ ಪ್ರಸ್ತಾ­ಪಿಸಲಿಲ್ಲ. ಆದರೆ, ತಾವಾಡಿದ ಮಾತು­ಗಳು ದೃಢವಾದುದು ಹಾಗೂ ಸತ್ಯವಾ­ದುದು ಎನ್ನುವುದನ್ನು ಹೇಳಿದರು.

‘ಸಾಹಿತ್ಯ ಸಮ್ಮೇಳನವು ಕೇವಲ ಯಾಂತ್ರಿಕ ಸಮ್ಮೇಳನವಾಗಬಾರದು. ಸ್ಥಳೀಯರು ಎದುರಿಸುವ ಸಮಸ್ಯೆಗಳ ಬಗ್ಗೆ ಚಿಂತನ–ಮಂಥನ ನಡೆಯಬೇಕು ಎನ್ನುವ ಬಯಕೆ ನನ್ನದು. ಆದ್ದರಿಂದಲೇ ಕೆಲವು ವಿಷಯಗಳನ್ನು ಪ್ರಜ್ಞಾಪೂರ್ವಕ­ವಾಗಿಯೇ ಮಾತನಾಡಿದೆ’ ಎಂದರು.

‘ಇದಕ್ಕೆ ಮಾಧ್ಯಮಗಳು ಸಾಕಷ್ಟು ಪ್ರಚಾರ ನೀಡಿದವು. ಈ ವಿಷಯಗಳ ಬಗ್ಗೆ ಚಿಂತನೆ ನಡೆಸುವಂತೆ ಜನರಿಗೆ ಪ್ರೇರೇಪಿಸಿದವು. ಕೆಲವು ವ್ಯಕ್ತಿಗಳಿಗೆ ಮಾತ್ರ ಭಾಷಣ ಪಥ್ಯವಾಗಲಿಲ್ಲ. ಇನ್ನುಳಿದಂತೆ ಬಹುಸಂಖ್ಯಾತ ಜನರು ಮೆಚ್ಚಿದರು. ಕೆಲವರು ದೂರವಾಣಿ ಮೂಲಕ, ಕೆಲವರು ಭೇಟಿ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನನ್ನ ಮಾತುಗಳು ಸತ್ಯವೆನಿಸಿದರೆ ಅವುಗಳ ಬಗ್ಗೆ ಜನರು ಚಿಂತನೆ ನಡೆಸಬೇಕು. ಇಂತಹ ಹಲವು ಸತ್ಯಗಳ ಬಗ್ಗೆ ಸಾಮಾನ್ಯ ಜನರು ಲೇಖಕರಿಂದ, ಸಾಹಿತಿಗಳಿಂದ ಕೇಳಲು ಬಯಸು­ತ್ತಿದ್ದಾರೆ. ಇದು ನಮ್ಮ (ಸಾಹಿತಿಗಳು) ಜವಾಬ್ದಾರಿಯೂ ಕೂಡ ಹೌದು. ಆದರೆ, ಇತ್ತೀಚಿನ ದಿನಗಳಲ್ಲಿ ಸಾಹಿತಿಗಳು ಮಾತುಗಳನ್ನಾಡುವುದನ್ನು ಕಡಿಮೆ ಮಾಡಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಭಾಷೆ, ಕೋಮು, ಸಂಸ್ಕೃತಿಯ ಬಗ್ಗೆ ಸಾಹಿತಿಗಳು ಸ್ಪಷ್ಟವಾಗಿ ಮಾತನಾಡ­ಬೇಕು. ಸಮಾಜ ನಮ್ಮಿಂದ ಇದನ್ನೇ ಬಯಸುತ್ತದೆ. ಆದರೆ, ಅಕಾಡೆಮಿ ಅಧ್ಯಕ್ಷ ಸ್ಥಾನ, ಯಾವುದೋ ಪ್ರಶಸ್ತಿ ಆಸೆಯಿಂದಾಗಿ ಅವರು ಮಾತನಾ­ಡುತ್ತಿಲ್ಲ’ ಎಂದು ಅವರು ಹೇಳುತ್ತಿದ್ದಂತೆ ಸಭಾಂಗಣದಲ್ಲಿ ಚಪ್ಪಾಳೆಯ ಸುರಿಮಳೆಯಾಯಿತು.
‘ಸಾಹಿತಿಗಳ ಈ ನಡತೆ ಬದಲಾಗ­ಬೇಕು. ಶ್ರೀಮಂತರ ಪರ ನಿಲ್ಲದೇ ಕೂಲಿಕಾರ್ಮಿಕರು, ಕೃಷಿ­ಕರು ಹಾಗೂ ಮುಳುಗಡೆ ಸಂತ್ರಸ್ತರ ಪರ ನಿಲ್ಲಬೇ­ಕಾಗಿದೆ. ಅವರಿಗೆ ಧ್ವನಿಯಾಗಬೇಕಾಗಿದೆ’ ಎಂದರು.

ಸಮ್ಮೇಳನದ ಉದ್ಘಾಟನೆ ದಿನ ಅವರು ತಮ್ಮ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಪರಿಸರ ಸಂರಕ್ಷಣೆ ಹಾಗೂ ಕಸ್ತೂರಿ ರಂಗನ್‌ ವರದಿಯ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸ್ಥಳೀಯ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್‌ ಅವರು, ನಾ.ಡಿಸೋಜ ಕ್ಷಮೆ­ಯಾಚಿಸಬೇಕೆಂದು ಒತ್ತಾಯಿಸಿದ್ದನ್ನು ಸ್ಮರಿಸಬಹುದು.

ಕಿಟೆಲ್‌ ಸ್ಮಾರಕಕ್ಕೆ ಮನವಿ:  ‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ರೆವರೆಂಡ್‌ ಕಿಟೆಲ್‌ ಹಾಗೂ ಮೊಗ್ಲಿಂಗ್‌ ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳ ಕಾಲ ಸುತ್ತಾಡಿದ್ದಾರೆ. ಕ್ರೈಸ್ತ್‌ ಧರ್ಮ ಪ್ರಚಾರಕ್ಕೆ ಬಂದಿದ್ದ ಅವರು, ಕನ್ನಡ ಕೃಷಿಯಲ್ಲಿ ತೊಡಗಿಕೊಂಡರು. ಅವರ ಸ್ಮರಣೆಯಲ್ಲಿ ಮಡಿಕೇರಿ­ಯಲ್ಲೊಂದು ಸ್ಮಾರಕ ನಿರ್ಮಿಸುವ ಕೆಲಸವನ್ನು ಕನ್ನಡಾಭಿಮಾನಿಗಳು ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.