ADVERTISEMENT

ಸದನದಲ್ಲಿ ಮಾರ್ದನಿಸಿದ ಕಾರ್ಯಕರ್ತೆಯರ ಕೂಗು

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಮುಂದುವರಿದ ಅಂಗನವಾಡಿ ಸಿಬ್ಬಂದಿ ಹೋರಾಟ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ಸದನದಲ್ಲಿ ಮಾರ್ದನಿಸಿದ ಕಾರ್ಯಕರ್ತೆಯರ ಕೂಗು
ಸದನದಲ್ಲಿ ಮಾರ್ದನಿಸಿದ ಕಾರ್ಯಕರ್ತೆಯರ ಕೂಗು   
ಬೆಂಗಳೂರು: ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ನಡೆಸುತ್ತಿರುವ ಪ್ರತಿಭಟನೆ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಮಾರ್ದನಿಸಿ, ಧರಣಿ, ಕೋಲಾಹಲಕ್ಕೆ ಕಾರಣವಾಯಿತು. 
 
ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ರಾಜ್ಯದಲ್ಲಿ 1.25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿದ್ದು, ಕನಿಷ್ಠ ವೇತನ ನಿಗದಿಗಾಗಿ 25 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸಿದರೆ ಸರ್ಕಾರಕ್ಕೆ  ₹612 ಕೋಟಿ ಹೆಚ್ಚುವರಿ 
ಹೊರೆ ಆಗಲಿದೆ.

₹ 1.86 ಲಕ್ಷ ಕೋಟಿಯ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿಗೆ ಇದೇನು ದೊಡ್ಡ ಸಂಗತಿಯಲ್ಲ’ ಎಂದು ಅವರು ವ್ಯಂಗ್ಯವಾಡಿದರು. ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಅವರು ದಿನಕ್ಕೆ ಆರೂವರೆ ಗಂಟೆ ದುಡಿಯುತ್ತಾರೆ. ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೆ ಹೋಲಿಸಿದರೆ ನಮ್ಮಲ್ಲಿ ಗೌರವಧನ ಕಡಿಮೆ ಇದೆ. ಅದನ್ನು  ₹10 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು. 
 
ಜೆಡಿಎಸ್‌ನ ವೈ.ಎಸ್‌.ವಿ. ದತ್ತ, ಬಿ.ಬಿ. ನಿಂಗಯ್ಯ, ಬಿಜೆಪಿಯ ಗೋವಿಂದ ಕಾರಜೋಳ , ಸಿ.ಟಿ. ರವಿ, ಕೆಜೆಪಿಯ ಬಿ.ಆರ್‌. ಪಾಟೀಲ, ಬಿಎಸ್‌ಆರ್‌ ಕಾಂಗ್ರೆಸ್‌ನ ಪಿ.ರಾಜೀವ್‌  ಅವರೂ  ಧ್ವನಿಗೂಡಿಸಿದರು.
 
ಸಿದ್ದರಾಮಯ್ಯ ಮಾತನಾಡಿ, ‘2016–17ರಲ್ಲಿ ಕೇಂದ್ರ  ಸರ್ಕಾರ ಐಸಿಡಿಎಸ್‌ ಯೋಜನಾ ವೆಚ್ಚವನ್ನು 60:40 ಅನುಪಾತಕ್ಕೆ ಇಳಿಸಿತು. ಇದರಿಂದಾಗಿ ನಾವು ₹5,200 ಹಾಗೂ ಕೇಂದ್ರ ಸರ್ಕಾರ ₹1,800 ಪಾವತಿ ಮಾಡುವಂತಾಯಿತು.   ಅಂಗನವಾಡಿ ಕಾರ್ಯಕರ್ತೆಯರು ಕೇಳದೆ ಇದ್ದರೂ ಈ ವರ್ಷ ₹1 ಸಾವಿರ  ಹೆಚ್ಚಿಸಿದ್ದೇವೆ’ ಎಂದರು.
 
ಸರ್ಕಾರ ಕ್ಷಮೆ ಕೇಳಬೇಕು: ವಿಧಾನಪರಿಷತ್ತಿನಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ  ಜೆಡಿಎಸ್‌ನ ಬಸವರಾಜ ಹೊರಟ್ಟಿ, ಮಹಿಳೆಯರು ರಾತ್ರಿ ಇಡೀ ರಸ್ತೆ ಮೇಲೆ ಧರಣಿ ಕೂರುವಂತೆ ಆಗಿದ್ದಕ್ಕೆ ಸರ್ಕಾರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
 
ಬೆಂಗಳೂರಿನಲ್ಲಿ ಕೊಲೆ, ಅಪಹರಣ, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವುದು ಸಾಮಾನ್ಯ ಎಂಬ ಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ಧರಣಿ ಸ್ಥಳದಲ್ಲಿ  ರಾತ್ರಿ ಪೊಲೀಸರು ಇರಲಿಲ್ಲ. 
 
ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಹೊರಟ್ಟಿ ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರನ್ನು ಕರೆಸಿ ಉತ್ತರ ಕೊಡಿಸುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ನೀಡಿದ ಉತ್ತರದಿಂದ ಸಮಾಧಾನಗೊಳ್ಳದ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಧರಣಿ ನಡೆಸಿದರು.
**
ಇಂದೂ ಧರಣಿ
ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರಿಂದ ಮಂಗಳವಾರ ಭೋಜನ ವಿರಾಮದ ಬಳಿಕ ವಿರೋಧ ಪಕ್ಷಗಳು ಧರಣಿ ವಾಪಸ್‌ ಪಡೆದಿದ್ದವು.

ಆದರೆ, ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಮುಂದುವರಿಸುವ ತೀರ್ಮಾನ ಕೈಗೊಂಡಿದ್ದರಿಂದಾಗಿ, ಬುಧವಾರ ಮತ್ತೆ ಸದನದಲ್ಲಿ ಹೋರಾಟ ನಡೆಸಲು ಜೆಡಿಎಸ್‌ ನಿರ್ಧರಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ವಿರೋಧ ಪಕ್ಷ ಬಿಜೆಪಿ ಸಹ ಧರಣಿ ಮುಂದುವರಿಸುವ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
***
ಮುಖ್ಯಮಂತ್ರಿ ಸಂಧಾನ ವಿಫಲ
ಮುಷ್ಕರ ನಿರತ ಅಂಗನವಾಡಿ ಕಾರ್ಯಕರ್ತೆಯ ಸಂಘಟನೆಯ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲವಾಗಿದೆ.
ಉಭಯ ಸದನಗಳಲ್ಲಿ ವಿರೋಧ ಪಕ್ಷಗಳು ಧರಣಿ ನಡೆಸಿದ್ದರಿಂದ  ಕಲಾಪ ಮುಂದೂಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರೊಂದಿಗೆ ಮಾತುಕತೆ  ನಡೆಸಿದ ಸಿದ್ದರಾಮಯ್ಯ, ಪ್ರತಿಭಟನೆ ಕೈಬಿಡುವುದಾಗಿ ಸಂಘಟಕರು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಉಭಯ ಸದನಗಳಲ್ಲಿ ಇದನ್ನು ಪ್ರಕಟಿಸಿದ ಬಳಿಕ ವಿರೋಧ ಪಕ್ಷದ ಸದಸ್ಯರು ಧರಣಿ ಹಿಂತೆಗೆದುಕೊಂಡರು.

ಸರ್ಕಾರ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸಲು ಸಂಘಟಕರು ನಿರ್ಧರಿಸಿದ್ದರಿಂದಾಗಿ, ಮುಖ್ಯಮಂತ್ರಿ ಸಂಧಾನ ಮುರಿದುಬಿದ್ದಿತು.
‌**
ಸಚಿವೆ ಉಮಾಶ್ರೀ ಹಸಿರು ಸೀರೆ ಉಟ್ಟು ಬಂದಿದ್ದಾರೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗೆ ಹಸಿರು ನಿಶಾನೆ ತೋರಲಿದ್ದಾರೆ.
ಲಕ್ಷ್ಮಣ ಸವದಿ,ಬಿಜೆಪಿ ಸದಸ್ಯ
**
ಕಾರ್ಯಕರ್ತೆಯರಿಗೆ ನೀಡುತ್ತಿರುವ ಸೀರೆ, ಪಂಚೆಯಷ್ಟೂ ಉದ್ದವಿಲ್ಲ.  ಅದನ್ನು  ಪಂಚೆಯ ರೀತಿಯಲ್ಲೂ ಉಡಲು  ಆಗದು.
ವೈ. ರಾಮಕ್ಕ, ಬಿಜೆಪಿ ಸದಸ್ಯೆ
**
ಸರ್ಕಾರ ಕೊಡುವ ₹ 3,500ಕ್ಕೆ ಒಬ್ಬ ವ್ಯಕ್ತಿಯ ಜೀವನ ನಿರ್ವಹಣೆ ಆಗುವುದಿಲ್ಲ. ಇನ್ನು ಸಂಸಾರ ನಡೆಸಲು ಸಾಧ್ಯವೇ?
ಕೆ.ಎಸ್‌. ಈಶ್ವರಪ್ಪ, ವಿರೋಧಪಕ್ಷದ ನಾಯಕ, ವಿಧಾನಪರಿಷತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.